ಉತ್ತರ ಪ್ರದೇಶ: ವಿಷಪೂರಿತ ಮದ್ಯ ಸೇವಿಸಿ ಐವರ ಸಾವು,16 ಜನರು ಆಸ್ಪತ್ರೆಗೆ ದಾಖಲು

ಸಾಂದರ್ಭಿಕ ಚಿತ್ರ
ಬುಲಂದಶಹರ್,ಜ.8: ಉತ್ತರ ಪ್ರದೇಶದ ಬುಲಂದಶಹರ್ ಜಿಲ್ಲೆಯ ಜೀತಗಡಿ ಗ್ರಾಮದಲ್ಲಿ ವಿಷಪೂರಿತ ಮದ್ಯ ಸೇವಿಸಿ ಐವರು ಸಾವನ್ನಪ್ಪಿದ್ದು,ಅಸ್ವಸ್ಥಗೊಂಡಿರುವ ಇತರ 16 ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಪ್ರದೇಶದಲ್ಲಿ ಕೆಲವು ಸಮಯದಿಂದ ಅಕ್ರಮವಾಗಿ ಮದ್ಯ ಮಾರಾಟವಾಗುತ್ತಿದ್ದರೂ ನಿರ್ಲಕ್ಷ್ಯ ವಹಿಸಿದ್ದಕ್ಕಾಗಿ ನಾಲ್ವರು ಪೊಲೀಸರನ್ನು ಅಮಾನತುಗೊಳಿಸಲಾಗಿದೆ. ಆರೋಪಿಗಳ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆ ಮತ್ತು ಗ್ಯಾಂಗ್ಸ್ಟರ್ಸ್ ಕಾಯ್ದೆಯಡಿ ಕ್ರಮ ಜರುಗಿಸುವಂತೆ ಮುಖ್ಯಮಂತ್ರಿ ಆದಿತ್ಯನಾಥ್ ಆದೇಶಿಸಿದ್ದಾರೆ.
ಬುಧವಾರ ರಾತ್ರಿ ಕುಲದೀಪ್ ಎಂಬಾತನಿಂದ ಮದ್ಯವನ್ನು ಖರೀದಿಸಿ ಸೇವಿಸಿದ ಬಳಿಕ ಜನರು ಅಸ್ವಸ್ಥಗೊಂಡಿದ್ದು,ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಪೈಕಿ 45ರಿಂದ 60 ವರ್ಷ ವಯೋಮಾನದ ಐವರು ಶುಕ್ರವಾರ ಬೆಳಿಗ್ಗೆ ಮೃತಪಟ್ಟಿದ್ದು,ಇತರ 16 ಜನರಿಗೆ ಚಿಕಿತ್ಸೆ ಮುಂದುವರಿದಿದೆ ಎಂದು ಎಸ್ಎಸ್ಪಿ ಸಂತೋಷ್ ಕುಮಾರ್ ಸಿಂಗ್ ಅವರು ಸುದ್ದಿಗಾರರಿಗೆ ತಿಳಿಸಿದರು.
ಮುಖ್ಯ ಆರೋಪಿ ತಲೆಮರೆಸಿಕೊಂಡಿದ್ದು,ಆತನ ಕೆಲವು ಸಹಚರರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.







