ಸಂಸತ್ ದಾಳಿಗೆ ಟ್ರಂಪ್ ಖಂಡನೆ: ‘ನೊಂದ ಮನಸ್ಸುಗಳು ಸಮಾಧಾನಗೊಳ್ಳಬೇಕು, ರಾಜಿ ಏರ್ಪಡಬೇಕು’ ಎಂದ ಅಮೆರಿಕ ಅಧ್ಯಕ್ಷ

ವಾಶಿಂಗ್ಟನ್, ಜ. 8: ಅಮೆರಿಕದ ಸಂಸತ್ ಮೇಲೆ ಬುಧವಾರ ನಡೆದ ದಾಳಿಯನ್ನು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗುರುವಾರ ರಾತ್ರಿ ಖಂಡಿಸಿದ್ದಾರೆ ಹಾಗೂ ನಿಯೋಜಿತ ಅಧ್ಯಕ್ಷ ಜೋ ಬೈಡನ್‌ಗೆ ಅಧಿಕಾರ ಹಸ್ತಾಂತರಿಸಲು ಸಿದ್ಧಗೊಳ್ಳುವುದಾಗಿ ಹೇಳಿದ್ದಾರೆ.
ವಾಶಿಂಗ್ಟನ್‌ನಲ್ಲಿರುವ ಶ್ವೇತಭವನದ ಎದುರು ಬುಧವಾರ ಟ್ರಂಪ್ ಮಾಡಿದ ಪ್ರಚೋದನಾತ್ಮಕ ಭಾಷಣ ಕೇಳಿದ ಅವರ ಸಾವಿರಾರು ಬೆಂಬಲಿಗರು, ಸಮೀಪದ ಕ್ಯಾಪಿಟಲ್ ಹಿಲ್‌ನಲ್ಲಿರುವ ಸಂಸತ್ ಕಟ್ಟಡಕ್ಕೆ ನುಗ್ಗಿ ದಾಂಧಲೆ ನಡೆಸಿದ್ದರು. ‘‘ಚುನಾವಣೆಯನ್ನು ನಮ್ಮಿಂದ ಕದಿಯಲಾಗಿದೆ. ಈ ಕಳ್ಳತನವನ್ನು ತಡೆಯಿರಿ ಹಾಗೂ ನಾನು ಅಧ್ಯಕ್ಷ ಪದವಿಯಲ್ಲಿ ಮುಂದುವರಿಯಲು ಸಹಾಯ ಮಾಡಿ’’ ಎಂಬುದಾಗಿ ಟ್ರಂಪ್ ತನ್ನ ಭಾಷಣದಲ್ಲಿ ಅಭಿಮಾನಿಗಳನ್ನು ಒತ್ತಾಯಿಸಿದ್ದರು. ಅವರ ಮಾತುಗಳನ್ನು ಕೇಳಿದ ಸಾವಿರಾರು ಉದ್ರಿಕ್ತ ಅಭಿಮಾನಿಗಳು ಸಂಸತ್‌ಗೆ ನುಗ್ಗಿ ದಾಂಧಲೆ ನಡೆಸಿದ್ದರು.
ದಾಂಧಲೆಯ ವೇಳೆ, ಸಂಸತ್ತು ನಿಯೋಜಿತ ಅಧ್ಯಕ್ಷ ಡೆಮಾಕ್ರಟಿಕ್ ಪಕ್ಷದ ಜೋ ಬೈಡನ್ ನವೆಂಬರ್‌ನಲ್ಲಿ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆದ್ದಿದ್ದಾರೆ ಎಂಬ ಪ್ರಮಾಣಪತ್ರ ನೀಡಲು ಸಿದ್ಧತೆಗಳನ್ನು ಆರಂಭಿಸುತ್ತಿತ್ತು.
ಬೈಡನ್ ಗೆದ್ದಿದ್ದಾರೆ ಎಂಬುದಾಗಿ ಪ್ರಮಾಣಪತ್ರ ನೀಡದಂತೆ ಸಂಸತ್ ಮೇಲೆ ಒತ್ತಡ ಹೇರುವುದಕ್ಕಾಗಿ ಟ್ರಂಪ್ ಬೆಂಬಲಿಗರು ಸಂಸತ್‌ನಲ್ಲಿ ದಾಂಧಲೆಗೆ ಇಳಿದರು. ಹಿಂದೆಂದೂ ಕಂಡರಿಯದ ಈ ದಾಂಧಲೆ ಮತ್ತು ಹಿಂಸಾಚಾರದಲ್ಲಿ ಓರ್ವ ಪೊಲೀಸ್ ಅಧಿಕಾರಿ ಸೇರಿದಂತೆ ಐವರು ಮೃತಪಟ್ಟಿದ್ದಾರೆ.
‘‘ಸಂಸತ್ ಕಟ್ಟಡಕ್ಕೆ ನುಗ್ಗಿದ ಪ್ರತಿಭಟನಾಕಾರರು ಅಮೆರಿಕದ ಪ್ರಜಾಸತ್ತೆಯನ್ನು ಅಪವಿತ್ರಗೊಳಿಸಿದ್ದಾರೆ’’ ಎಂದು ವೀಡಿಯೊ ಸಂದೇಶವೊಂದರಲ್ಲಿ ಟ್ರಂಪ್ ಹೇಳಿದ್ದಾರೆ.
‘‘ನೊಂದ ಮನಸ್ಸುಗಳು ಸಮಾಧಾನಗೊಳ್ಳಬೇಕು, ರಾಜಿ ಏರ್ಪಡಬೇಕು’’ ಎಂಬುದಾಗಿಯೂ ಟ್ರಂಪ್ ತನ್ನ ಸಂದೇಶದಲ್ಲಿ ಕರೆ ನೀಡಿದ್ದಾರೆ. ‘‘ಕ್ರಮಬದ್ಧವಾದ, ಸುಗಮ ಅಧಿಕಾರ ಹಸ್ತಾಂತರದತ್ತ ನಾನು ಇನ್ನು ಗಮನ ಹರಿಸುತ್ತೇನೆ’’ ಎಂದು ಅವರು ಹೇಳಿದ್ದಾರೆ. ತನ್ನ ನಡೆಯ ಬಗ್ಗೆ ತನ್ನ ಅತ್ಯಂತ ಆತ್ಮೀಯ ಮಿತ್ರರು ಹಾಗೂ ಸಹಾಯಕರಲ್ಲೂ ಸ್ಫೋಟಿಸಿರುವ ಅಸಮಾಧಾನವನ್ನು ಶಮನಗೊಳಿಸುವ ಉದ್ದೇಶದಿಂದ ಅವರು ಈ ಹೇಳಿಕೆ ನೀಡಿದ್ದಾರೆ ಎಂದು ಭಾವಿಸಲಾಗಿದೆ.
‘‘ಜನವರಿ 20ರಂದು ನೂತನ ಸರಕಾರದ ಸ್ಥಾಪನೆಯಾಗುವುದು’’ ಎಂದು ಅವರು ಹೇಳಿದ್ದಾರೆ.
ಆರಂಭದಲ್ಲಿ, ಸಂಸತ್ ಮೇಲಿನ ದಾಳಿಯನ್ನು ಖಂಡಿಸುವ ಯಾವುದೇ ಉದ್ದೇಶವನ್ನು ಟ್ರಂಪ್ ಹೊಂದಿರಲಿಲ್ಲ ಎನ್ನಲಾಗಿದೆ. ಎಲ್ಲೆಡೆ ಒತ್ತಡ ಹೆಚ್ಚುತ್ತಿರುವ ನಡುವೆ, ಪುತ್ರಿ ಇವಾಂಕಾ ಟ್ರಂಪ್ ಮಧ್ಯಪ್ರವೇಶಿಸಿ ಮನವೊಲಿಸಿದ ಬಳಿಕ ಅವರು ದಾಳಿಯನ್ನು ಖಂಡಿಸುವ ವೀಡಿಯೊವನ್ನು ಬಿಡುಗಡೆ ಮಾಡಿದ್ದಾರೆನ್ನಲಾಗಿದೆ.