ಮಂಗಳೂರು ಬೀಚ್: ಅಕ್ರಮ ಚಟುವಟಿಕೆಯಲ್ಲಿ ಭಾಗಿಯಾದವರ ವಿರುದ್ಧ ಕೇಸು
ಮಂಗಳೂರು, ಜ.8: ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಪ್ರಮುಖ 4 ಬೀಚ್‌ಗಳಲ್ಲಿ ಗುರುವಾರ ಸಂಜೆ ಏಕಕಾಲಕ್ಕೆ ನಗರ ಪೊಲೀಸರು ಕಾರ್ಯಾಚರಣೆ ನಡೆಸಿ, ಅಕ್ರಮ ಚಟುವಟಿಕೆಯಲ್ಲಿ ಭಾಗಿಯಾದವರ ಮೇಲೆ ಪ್ರಕರಣ ದಾಖಲಿಸಿದ್ದಾರೆ.
ಸುರತ್ಕಲ್ ಬೀಚ್ ಬಳಿ ಗಾಂಜಾ ಮಾರಾಟ ಆರೋಪದ ಮೇಲೆ ಯುವಕನೊಬ್ಬನ ಮೇಲೆ ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈತ ಗಾಂಜಾವನ್ನು ಮಾತ್ರೆ, ಚಾಕಲೇಟ್ ರೂಪದಲ್ಲಿ ಮಾರಾಟ ಮಾಡಿರುವುದು ಪತ್ತೆಯಾಗಿದ್ದು, ಆತನನ್ನು ವಶಕ್ಕೆ ಪಡೆಯಲಾಗಿದೆ.
ಕಾರ್ಯಾಚರಣೆ ಸಂದರ್ಭ 70ಕ್ಕೂ ಅಧಿಕ ವ್ಯಕ್ತಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದ್ದು, ಇವರಲ್ಲಿ ಬಹುತೇಕ ಮಂದಿ ಬೀಚ್ ತಟದಲ್ಲಿ ಮದ್ಯಪಾನ ಮಾಡುತ್ತಿದ್ದರು. ಸರಿಯಾದ ದಾಖಲಾತಿಗಳಿಲ್ಲದ 12ಬೈಕ್‌ಗಳು, 2 ಕಾರುಗಳನ್ನು ವಶಪಡಿಸಿ ಕೊಳ್ಳಲಾಗಿದೆ. ಇವುಗಳ ವಿರುದ್ಧ 10ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿರುವುದು ಪತ್ತೆಯಾಗಿದೆ. ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಮಾಡುತ್ತಿರುವವರನ್ನು ನಗರ ಪುರಭವನಕ್ಕೆ ಕರೆದುಕೊಂಡು ಬಂದು ಎಚ್ಚರಿಕೆ ನೀಡಿ ಕಳುಹಿಸಲಾಗಿದೆ.
ಕಾರ್ಯಾಚರಣೆಯಲ್ಲಿ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್, ಮಂಗಳೂರು ಕಾನೂನು ಸುವ್ಯವಸ್ಥಾ ವಿಭಾಗದ ಡಿಸಿಪಿ ಹರಿರಾಮ್ ಶಂಕರ್, ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ವಿನಯ್ ಗಾಂವ್ಕರ್, ಎಸಿಪಿಗಳಾದ ಜಗದೀಶ್, ಬೆಳ್ಳಿಯಪ್ಪ ಸೇರಿದಂತೆ ಆಯಾ ಠಾಣಾ ಇನ್‌ಸ್ಪೆಕ್ಟರ್‌ಗಳು, ಸಿಬ್ಬಂದಿ ಉಪಸ್ಥಿತರಿದ್ದರು.





