ಜನರಿಂದ ದೂರ ಸರಿಯುತ್ತಿರುವ ಟ್ರಂಪ್: ತನ್ನನ್ನು ಧಿಕ್ಕರಿಸಿದ ಉಪಾಧ್ಯಕ್ಷ ಪೆನ್ಸ್ ವಿರುದ್ಧ ಭಾರೀ ಆಕ್ರೋಶ

ವಾಶಿಂಗ್ಟನ್, ಜ. 8: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶ್ವೇತಭವನದಲ್ಲಿ ಜನರಿಂದ ಹೆಚ್ಚೆಚ್ಚು ದೂರ ಸರಿಯುತ್ತಿದ್ದಾರೆ. ಕಟ್ಟಾ ನಿಷ್ಠಾವಂತರ ಸಣ್ಣ ಗುಂಪಿನೊಂದಿಗೆ ಮಾತ್ರ ಅವರು ವ್ಯವಹರಿಸುತ್ತಿದ್ದಾರೆ ಹಾಗೂ ಉಪಾಧ್ಯಕ್ಷ ಮೈಕ್ ಪೆನ್ಸ್ ಸೇರಿದಂತೆ ತನ್ನನ್ನು ಧಿಕ್ಕರಿಸಿದವರ ವಿರುದ್ಧ ಹರಿಹಾಯುತ್ತಿದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಿ ‘ರಾಯ್ಟರ್ಸ್’ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಟ್ರಂಪ್ ತನ್ನ ಸಾವಿರಾರು ಬೆಂಬಲಿಗರನ್ನು ಅಮೆರಿಕ ಸಂಸತ್‌ನ ಮೇಲೆ ಛೂ ಬಿಟ್ಟ ಬಳಿಕ, ಅವರ ಕೆಲವು ದೀರ್ಘಕಾಲೀನ ಸಲಹೆಗಾರರು ಅವರಿಂದ ದೂರ ಉಳಿದಿದ್ದಾರೆ.
ಅಧ್ಯಕ್ಷರೊಂದಿಗೆ ಇತ್ತೀಚೆಗೆ ಸಂಪರ್ಕದಲ್ಲಿದ್ದೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಸಲಹೆಗಾರರೊಬ್ಬರು, ‘‘ನನಗೆ ಇಷ್ಟವಿಲ್ಲ’’ ಎಂದರು.
ಅಧ್ಯಕ್ಷೀಯ ಚುನಾವಣೆಯಲ್ಲಿ ಜೋ ಬೈಡನ್‌ರ ವಿಜಯವನ್ನು ಪ್ರಮಾಣೀಕರಿಸುವುದರಿಂದ ಸಂಸತ್ತು ಕಾಂಗ್ರೆಸ್ಸನ್ನು ತಡೆಯಲು ಪೆನ್ಸ್ ನಿರಾಕರಿಸಿದ್ದರು. ಅದಕ್ಕಾಗಿ ಟ್ರಂಪ್ ಸಾರ್ವಜನಿಕವಾಗಿ ಮತ್ತು ಖಾಸಗಿಯಾಗಿ ಪೆನ್ಸ್‌ರನ್ನು ಪದೇ ಪದೇ ತರಾಟೆಗೆ ತೆಗೆದುಕೊಂಡಿದ್ದಾರೆ ಎಂದು ಹೇಳಲಾಗಿದೆ. ಅದೂ ಅಲ್ಲದೆ, ಪೆನ್ಸ್ ತನ್ನ ಸಾಂವಿಧಾನಿಕ ಕರ್ತವ್ಯವನ್ನು ನಿಭಾಯಿಸುತ್ತಾರೆ ಎಂಬ ಹೇಳಿಕೆ ನೀಡಿರುವುದಕ್ಕಾಗಿ ಅವರ ಸಿಬ್ಬಂದಿ ಮುಖ್ಯಸ್ಥ ಮಾರ್ಕ್ ಶಾರ್ಟ್ ವಿರುದ್ಧ ಟ್ರಂಪ್ ಬುಸುಗುಡುತ್ತಿದ್ದಾರೆ ಎಂದು ಮೂಲಗಳು ಹೇಳಿವೆ.
ಈ ವಾರ ಟ್ರಂಪ್, ಪೆನ್ಸ್‌ರನ್ನು ಹಲವು ಬಾರಿ ತರಾಟೆಗೆ ತೆಗೆದುಕೊಂಡಿದ್ದಾರೆ ಎಂದು ಒಂದು ಮೂಲ ತಿಳಿಸಿದೆ.
ಅಧ್ಯಕ್ಷ ಮತ್ತು ಉಪಾಧ್ಯಕ್ಷರ ನಡುವಿನ ಮನಸ್ತಾಪ ಎಷ್ಟು ಆಳವಾಗಿದೆಯೆಂದರೆ ಅವರು ಇನ್ನೆಂದೂ ಪರಸ್ಪರ ಮಾತನಾಡಲಾರರು ಎಂದು ಮಾಜಿ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಇಂಡಿಯಾನ ರಾಜ್ಯದ ಮಾಜಿ ಗವರ್ನರ್ ಆಗಿರುವ ಪೆನ್ಸ್, ಟ್ರಂಪ್ ಅಧ್ಯಕ್ಷತೆಯ ನಾಲ್ಕು ವರ್ಷಗಳ ಕಾಲ ಅವರಿಗೆ ಸಂಪೂರ್ಣ ನಿಷ್ಠರಾಗಿದ್ದರು. ಪೆನ್ಸ್ ಮುಂದೆ ಅಧ್ಯಕ್ಷ ಹುದ್ದೆಯ ಆಕಾಂಕ್ಷೆಯನ್ನು ಹೊಂದಿದ್ದಾರೆ.
‘ಪೆನ್ಸ್ ಬಗ್ಗೆ ಎಲ್ಲರಿಗೂ ಹೆಮ್ಮೆಯಿದೆ’
ತನ್ನ ಸಾಂವಿಧಾನಿಕ ಕರ್ತವ್ಯವನ್ನು ಉಪಾಧ್ಯಕ್ಷ ಮೈಕ್ ಪೆನ್ಸ್ ನಿಭಾಯಿಸಿದ ರೀತಿಯ ಬಗ್ಗೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ಟ್ರಂಪ್ ಸಲಹೆಗಾರರೊಬ್ಬರು ಹೇಳಿದ್ದಾರೆ.
ನಿಯೋಜಿತ ಅಧ್ಯಕ್ಷ ಜೋ ಬೈಡನ್‌ರ ಚುನಾವಣಾ ವಿಜಯಕ್ಕೆ ಸಂಸತ್ ದೃಢೀಕರಣ ನೀಡುವ ವಿಷಯದಲ್ಲಿ ನಾನು ಹಸ್ತಕ್ಷೇಪ ನಡೆಸುವುದಿಲ್ಲ ಎಂಬುದಾಗಿ ಅವರು ನೇರವಾಗಿಯೇ ಹೇಳಿದ್ದರು.
‘‘ಮೆಕ್ ಪೆನ್ಸ್ ಅಧ್ಯಕ್ಷರನ್ನು ಅಚ್ಚರಿಯಲ್ಲಿ ಕೆಡವಲಿಲ್ಲ. ಬದಲಿಗೆ, ತಾನು ಸಂಸತ್‌ನಲ್ಲಿ ಏನು ಮಾಡಲಿದ್ದೇನೆ ಎನ್ನುವುದನ್ನು ಅವರು ಮುಂಚಿತವಾಗಿಯೇ ಟ್ರಂಪ್‌ಗೆ ಹೇಳಿದ್ದರು. ಆ ವಿಷಯದಲ್ಲಿ ಅವರು ಪ್ರಾಮಾಣಿಕತೆಯಿಂದ ಸಂವಿಧಾನಬದ್ಧವಾಗಿ ಕಾರ್ಯನಿರ್ವಹಿಸಿದ್ದಾರೆ. ಎಲ್ಲರಿಗೂ ಅವರ ಬಗ್ಗೆ ಹೆಮ್ಮೆಯಿದೆ’’ ಎಂದು ಸಲಹೆಗಾರ ಹೇಳಿದ್ದಾರೆ.







