ಮೊದಲ ಹಂತದಲ್ಲಿ ಉಡುಪಿ ಜಿಲ್ಲೆಯ 19,562 ಮಂದಿಗೆ ಲಸಿಕೆ: ಡಿಸಿ ಜಿ.ಜಗದೀಶ್
ಕೊರೋನ ನಿಯಂತ್ರಣಕ್ಕಾಗಿ ಲಸಿಕೆಯ ತಾಲೀಮಿಗೆ ಚಾಲನೆ

ಉಡುಪಿ, ಜ.8: ಕೋವಿಡ್-19 ನಿಯಂತ್ರಣದ ನಿಟ್ಟಿನಲ್ಲಿ ಲಭ್ಯವಾಗುವ ಲಸಿಕೆ ನೀಡುವ ಪೂರ್ವಭಾವಿ ಸಿದ್ಧತೆಯಾಗಿ ಲಸಿಕೆಯ ತಾಲೀಮಿಗೆ (ಡ್ರೈ ರನ್) ಶುಕ್ರವಾರ ಸರಕಾರಿ ಕೂಸಮ್ಮ ಶಂಭು ಶೆಟ್ಟಿ ಸ್ಮಾರಕ ಹಾಜಿ ಅಬ್ದುಲ್ಲಾ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಜಿಲ್ಲಾಧಿಕಾರಿ ಜಿ.ಜಗದೀಶ್ ಚಾಲನೆ ನೀಡಿದರು.
ಉಡುಪಿ ಜಿಲ್ಲೆಯ ಎಂಟು ಕೇಂದ್ರಗಳಲ್ಲಿ ಇಂದು ಲಸಿಕೆ ನೀಡಿಕೆಗೆ ತಾಲೀಮು ನಡೆಯುತ್ತಿದೆ. ಜಿಲ್ಲೆಯಲ್ಲಿ ಒಟ್ಟು ಮೂರು ಹಂತ ಗಳಲ್ಲಿ ಲಸಿಕೆ ನೀಡಲು ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಸಿದ್ಧತೆಯಲ್ಲಿರುವ ಲೋಪದೋಷಗಳನ್ನು ತಿಳಿದುಕೊಳ್ಳಲು ಇಂದಿನ ಡ್ರೈ ರನ್‌ನ್ನು ಬಳಸಿಕೊಳ್ಳಲಾಗುತ್ತಿದೆ ಎಂದರು.
ಜಿಲ್ಲೆಯ 105 ಸರಕಾರಿ ಆರೋಗ್ಯ ಸಂಸ್ಥೆಗಳು ಹಾಗೂ 762 ಖಾಸಗಿ ಆರೋಗ್ಯ ಸಂಸ್ಥೆಗಳು ಸೇರಿದಂತೆ ಒಟ್ಟು 867 ಸಂಸ್ಥೆಗಳಲ್ಲಿರುವ ವೈದ್ಯರು, ದಾದಿಯರು ಹಾಗೂ ಆರೋಗ್ಯ ಕಾರ್ಯಕರ್ತೆಯರು ಸೇರಿದಂತೆ ಮೊದಲ ಹಂತದಲ್ಲಿ ಒಟ್ಟು 19,562 ಮಂದಿ ಫಲಾನುಭವಿಗಳನ್ನು ಗುರುತಿಸಿ ನೊಂದಾಯಿಸಿಕೊಳ್ಳಲಾಗಿದೆ. ಇವುಗಳಲ್ಲಿ 5688 ಮಂದಿ ಸರಕಾರಿ ಸಂಸ್ಥೆಗಳ ಹಾಗೂ 13,874 ಮಂದಿ ಖಾಸಗಿ ಆರೋಗ್ಯ ಸಂಸ್ಥೆಗಳ ಫಲಾನುಭವಿಗಳಿದ್ದಾರೆ ಎಂದು ಜಗದೀಶ್ ತಿಳಿಸಿದರು.
ಜಿಲ್ಲೆಗೆ ಕೋವಿಡ್ ವ್ಯಾಕ್ಸಿನ್ ಲಭ್ಯವಾದ ತಕ್ಷಣ ಇವರಿಗೆಲ್ಲರಿಗೂ ಮೊದಲ ಹಂತದಲ್ಲಿ ವ್ಯಾಕ್ಸಿನ್ ನೀಡಲಾಗುತ್ತದೆ. ಆ ಬಳಿಕ ಎರಡನೇ ಹಂತದಲ್ಲಿ ಮುಂಚೂಣಿಯ ಆರೋಗ್ಯ ಸಿಬ್ಬಂದಿಗಳಿಗೆ ಲಸಿಕೆಯನ್ನು ನೀಡಲಾಗುತ್ತಿದೆ. ಇದಕ್ಕಾಗಿ ಇವರ ಪಟ್ಟಿಯನ್ನು ಸಿದ್ಧಪಡಿಸುವ ಪ್ರಕ್ರಿಯೆ ಆರಂಭಗೊಂಡಿದೆ. ಲಸಿಕೆಯನ್ನು ಪಡೆಯಲು ಬಯಸುವ ಜಿಲ್ಲೆಯ ಎಲ್ಲಾ ಮುಂಚೂಣಿ ಆರೋಗ್ಯ ಕಾರ್ಯ ಕರ್ತರು ತಕ್ಷಣ ಹೆಸರು ನೊಂದಾಯಿಸಿಕೊಳ್ಳಬೇಕು. ಪಟ್ಟಿಯಲ್ಲಿ ಹೆಸರು ಇಲ್ಲದವರಿಗೆ ಲಸಿಕೆಯನ್ನು ನೀಡಲಾಗುವುದಿಲ್ಲ. ಮೂರನೇ ಹಂತದಲ್ಲಿ 50 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಲಸಿಕೆ ಲಭ್ಯವಿರುತ್ತದೆ ಎಂದು ಜಿಲ್ಲಾಧಿಕಾರಿ ಹೇಳಿದರು.
ಜಿಲ್ಲಾಡಳಿತ ಈವರೆಗೆ ಕೋವಿಡ್-19 ನಿಯಂತ್ರಣಕ್ಕೆ ಸಾಕಷ್ಟು ಹೋರಾಟ ನಡೆಸಿ ಯಶಸ್ವಿಯಾಗಿದ್ದು, ಇದೀಗ ಮುಂದಿನ ಹಂತಕ್ಕೆ ಕಾಲಿರಿಸಿದ್ದೇವೆ. ಲಭ್ಯ ಲಸಿಕೆಯನ್ನು ಜಿಲ್ಲೆಯಲ್ಲಿ ಅಚ್ಚುಕಟ್ಟಾಗಿ ನಿರ್ವಹಿಸಲು ಈಗಾಗಲೇ ಸಭೆಯನ್ನು ಕರೆದು ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದರು.
ಜಿಲ್ಲೆಯಲ್ಲಿ ಎರಡು ಹಂತಗಳನ್ನು ಜನವರಿ ತಿಂಗಳ ಕೊನೆಯೊಳಗೆ ಮುಗಿಸುವಂತೆ ಮುಖ್ಯ ಕಾರ್ಯದರ್ಶಿಗಳಿಂದ ಸೂಚನೆ ಬಂದಿದೆ. ಇದರರ್ಥ ಶೀಘ್ರವೇ ಜಿಲ್ಲೆಗೆ ವ್ಯಾಕ್ಸಿನ್ ಲಭ್ಯವಾಗಲಿದೆ. ಚುನಾವಣಾ ಸಿದ್ಧತೆಯಷ್ಟೇ ಗಂಭೀರವಾಗಿ ಜಿಲ್ಲಾಡಳಿತ ಇದನ್ನೂ ತೆಗೆದುಕೊಳ್ಳಲಿದೆ ಎಂದು ಜಗದೀಶ್ ನುಡಿದರು.
8 ಕೇಂದ್ರಗಳಲ್ಲಿ ತಲಾ 25 ಮಂದಿ: ಅತಿಥಿಗಳನ್ನು ಸ್ವಾಗತಿಸಿ ಮಾತನಾಡಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸುಧೀರ್‌ಚಂದ್ರ ಸೂಡ, ಇಂದು ಜಿಲ್ಲೆಯ ಒಟ್ಟು ಎಂಟು ಕೇಂದ್ರಗಳಲ್ಲಿ ಲಸಿಕೆ ತಾಲೀಮು ಪ್ರಕ್ರಿಯೆ ನಡೆಸಲಾಗಿದೆ. ಪ್ರತಿ ಕೇಂದ್ರಗಳಲ್ಲಿ ಗುರುತಿಸಿದ 25 ಮಂದಿಗೆ ಇದನ್ನು ನಡೆಸಲಾಗಿದೆ ಎಂದರು.
ಮೊದಲ ಹಂತದಲ್ಲಿ ಲಸಿಕೆಗಾಗಿ ಜಿಲ್ಲೆಯ ಒಟ್ಟು 19,562 ಮಂದಿ ಆರೋಗ್ಯ ಕಾರ್ಯಕರ್ತೆಯರು ತಮ್ಮ ಹೆಸರುಗಳನ್ನು ಕೋವಿಡ್ ಪೋರ್ಟಲ್‌ನಲ್ಲಿ ನೊಂದಾಯಿಸಿಕೊಂಡಿದ್ದಾರೆ. ಇವರಿಗೆಲ್ಲರಿಗೂ ಮೊದಲ ಆದ್ಯತೆಯಲ್ಲಿ ಲಸಿಕೆ ನೀಡಲಾಗುವುದು. ಯಾವುದೇ ಕ್ಷಣದಲ್ಲಿ ವ್ಯಾಕ್ಸಿನ್ ಬಂದರೂ ಅದಕ್ಕೆ ಬೇಕಾದ ಎಲ್ಲಾ ಪರಿಕರ, ತಂಪು ಬಾಕ್ಸ್ ಹಾಗೂ ಇತರ ಸಲಕರಣೆಗಳನ್ನು ಸಿದ್ಧವಾಗಿಟ್ಟು ಕೊಂಡಿದ್ದೇವೆ ಎಂದರು.
70,000ಲೀ.ನ ವಾಕ್ ಇನ್ ಕೂಲರ್: ಜಿಲ್ಲೆಯಲ್ಲಿ ಲಸಿಕೆಯನ್ನು ಕಾದಿರಿಸಲು 70,000 ಲೀಟರ್ (2.28 ಕೋಟಿ ಡೋಸ್) ಸಾಮರ್ಥ್ಯದ ವಾಕ್‌ಇನ್ ಕೂಲರ್‌ನ್ನು ಸಜ್ಜಾಗಿ ಇರಿಸಲಾಗಿದೆ. 1324 ಲಸಿಕೆ ಸಾಗಾಟ ವಾಹನ, 38 ಕೋಲ್ಡ್‌ಬಾಕ್ಸ್, 79 ಡೀಪ್ ಫ್ರೀಜರ್, 89 ಐಎಲ್‌ಆರ್‌ಗಳು ಸಹ ಈಗಾಗಲೇ ಸಿದ್ಧವಾಗಿದೆ ಎಂದು ಡಾ.ಸೂಡ ತಿಳಿಸಿದರು.
ಲಸಿಕೆ ನೀಡುವುದಕ್ಕಾಗಿ ಪ್ರತಿ ಕೇಂದ್ರಗಳಲ್ಲಿ ಮೂರು ಕೋಣೆಗಳನ್ನು ಸಜ್ಜುಗೊಳಿಸಲಾಗುತ್ತದೆ. ನಾಲ್ವರು ವ್ಯಾಕ್ಸಿನೇಷನ್ ಅಧಿಕಾರಿಗಳು ಹಾಗೂ ಒಬ್ಬ ವ್ಯಾಕ್ಸಿನ್ ನೀಡುವ ಅಧಿಕಾರಿ ಫಲಾನುಭವಿಗಳಿಗೆ ಲಸಿಕೆ ನೀಡುವ ಕೆಲಸವನ್ನು ನಿರ್ವಹಿಸಲಿದ್ದಾರೆ. ಲಸಿಕೆ ನೀಡಿದಾಗ ಅಲರ್ಜಿ ಅಥವಾ ಅಡ್ಡಪರಿಣಾಮದ ಎಲ್ಲಾ ಸಾಧ್ಯತೆಗಳಿರುತ್ತದೆ. ಎಲ್ಲಾ ಕೇಂದ್ರಗಳಲ್ಲೂ ಅಡ್ಡಪರಿಣಾಮಗಳನ್ನು ನಿಭಾಯಿಸಲು ಬೇಕಾದ ಸಿದ್ಧತೆಗಳನ್ನು ಸಹ ಮಾಡಿಕೊಳ್ಳಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಸರ್ಜನ್ ಡಾ.ಮಧುಸೂದನ್ ನಾಯಕ್, ಜಿಲ್ಲಾ ಕೋವಿಡ್ ನೋಡೆಲ್ ಅಧಿಕಾರಿ ಡಾ.ಪ್ರಶಾಂತ್ ಭಟ್, ಜಿಲ್ಲಾ ಲಸಿಕಾ ಅಧಿಕಾರಿ ಡಾ. ಎಂ.ಜಿ.ರಾಮ ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
8 ಕೇಂದ್ರಗಳಲ್ಲಿ ತಾಲೀಮು
ಶುಕ್ರವಾರ ಜಿಲ್ಲೆಯ ಆರು ಸರಕಾರಿ ಸಂಸ್ಥೆ ಹಾಗೂ ಎರಡು ಖಾಸಗಿ ಆರೋಗ್ಯ ಸಂಸ್ಥೆಗಳಲ್ಲಿ ಲಸಿಕೆಗೆ ತಾಲೀಮು ನಡೆಸಲಾ ಯಿತು. ಒಟ್ಟು 25 ಮಂದಿ ಫಲಾನುಭವಿಗಳನ್ನು ಇದಕ್ಕಾಗಿ ಆಯ್ಕೆ ಮಾಡಲಾಯಿತು.
ಸರಕಾರಿ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಉಡುಪಿ, ಸಮುದಾಯ ಆರೋಗ್ಯ ಕೇಂದ್ರ ಬ್ರಹ್ಮಾವರ, ಸಮುದಾಯ ಆರೋಗ್ಯ ಕೇಂದ್ರ ಹೆಬ್ರಿ, ತಾಲೂಕು ಸಾರ್ವಜನಿಕ ಆಸ್ಪತ್ರೆ ಕಾರ್ಕಳ, ಪ್ರಾಥಮಿಕ ಆರೋಗ್ಯ ಕೇಂದ್ರ ಕಂಡ್ಲೂರು, ಉಡುಪಿ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ (ಬಿಆರ್‌ಸಿ ಸೆಂಟರ್), ಡಾ.ಟಿಎಂಎ ಪೈ ಆಸ್ಪತ್ರೆ ಉಡುಪಿ, ಆದರ್ಶ ಆಸ್ಪತ್ರೆ ಉಡುಪಿ ಇಲ್ಲಿ ಇಂದು ಡ್ರೈ ರನ್ ನಡೆಯಿತು.
''ಲಸಿಕೆ ಮೊದಲು ಅಥವಾ ನಂತರ ಯಾವುದೇ ಸಂದರ್ಭವನ್ನು ನಿರ್ವಹಿಸಲು ರ್ಯಾಪಿಡ್ ರೆಸ್ಪಾನ್ಸ್ ಟೀಮ್ ಹಾಗೂ ಸುಸಜ್ಜಿತ ಅಂಬುಲೆನ್ಸ್ ಸಿದ್ಧವಾಗಿರುತ್ತದೆ. ಸಾರ್ವಜನಿಕರು ಸಾಮಾಜಿಕ ಜಾಲತಾಣಗಳಲ್ಲಿ ಬರುವ ಅಪಪ್ರಚಾರಗಳಿಗೆ ಕಿವಿಗೊಡದೇ, ಮುಕ್ತ ಮನಸ್ಸಿನಿಂದ ಲಸಿಕೆಯನ್ನು ತೆಗೆದುಕೊಳ್ಳಬೇಕು''.
-ಜಿಲ್ಲಾಧಿಕಾರಿ ಜಿ.ಜಗದೀಶ್








