'ಸನಾತನ ಅನುಭವ ಮಂಟಪ'ದ ಹಿಂದೆ ಆರೆಸ್ಸೆಸ್ ಕುತಂತ್ರ: ಸಿದ್ದರಾಮಯ್ಯ
''ಬಸವಣ್ಣ ಅವರು ಹೋರಾಟ ಮಾಡಿದ್ದೇ ಸನಾತನ ಧರ್ಮದ ವಿರುದ್ಧ''

ಬೆಂಗಳೂರು, ಜ.8: ಸನಾತನ ಧರ್ಮದ ಮರು ಸೃಷ್ಟಿ ಎಂದು ಹೇಳಿ ಅನುಭವ ಮಂಟಪಕ್ಕೆ ಶಿಲಾನ್ಯಾಸ ಮಾಡಿರುವ ಹಿಂದೆ ಆರೆಸ್ಸೆಸ್ ಕುತಂತ್ರ ಇದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಟೀಕಿಸಿದರು.
ಶುಕ್ರವಾರ ನಗರದ ಖಾಸಗಿ ಸಭಾಂಗಣದಲ್ಲಿ ಕೆಪಿಸಿಸಿ ವತಿಯಿಂದ ಹಮ್ಮಿಕೊಂಡಿದ್ದ ಬೆಂಗಳೂರು ವಿಭಾಗ ಮಟ್ಟದ ನಾನಾ ಜಿಲ್ಲೆಗಳ ಕಾಂಗ್ರೆಸ್ ಸ್ಥಳೀಯ ಮುಖಂಡರ ಜತೆ ಸಮಾಲೋಚನೆ ಮತ್ತು ಸಂಕಲ್ಪ ಸಮಾವೇಶವನ್ನುದ್ದೇಶಿಸಿ ಅವರು ಮಾತನಾಡಿದರು.
ಬಸವಕಲ್ಯಾಣದಲ್ಲಿ ಅನುಭವ ಮಂಟಪ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಿದ್ದು ನಮ್ಮ ಸರಕಾರ. ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸಂಘ ಪರಿವಾರದವರ ಸಲಹೆ ಮೇರೆಗೆ ಸನಾತನ ಧರ್ಮದ ಮರು ಸೃಷ್ಟಿ ಎಂದು ಹೇಳಿ ಅನುಭವ ಮಂಟಪಕ್ಕೆ ಶಿಲಾನ್ಯಾಸ ಮಾಡಿದ್ದಾರೆ. ಆದರೆ, ಬಸವಣ್ಣ ಅವರು ಹೋರಾಟ ಮಾಡಿದ್ದೇ ಸನಾತನ ಧರ್ಮದ ವಿರುದ್ಧ. ಇದು ಆರೆಸ್ಸೆಸ್‍ನವರ ಕುತಂತ್ರ ಎಂದು ತಿಳಿಸಿದರು.
ನಾವು ಗಾಂಧಿ, ಲೋಹಿಯಾ ಅವರ ಹಿಂದುತ್ವದ ಪ್ರತಿಪಾದಕರು. ಆದರೆ ಬಿಜೆಪಿಯವರು ಸಾವರ್ಕರ್ ಹಿಂದುತ್ವ ಪ್ರತಿಪಾದನೆ ಮಾಡುತ್ತಿದ್ದಾರೆ. ಅದು ಸಾಮಾಜಿಕ ನ್ಯಾಯಕ್ಕೆ ವಿರುದ್ಧ ಎಂದ ಅವರು, ಹಿಂದುತ್ವ ಎಂದರೆ ಹಿಂದುತ್ವವೇ. ನೆಹರೂ, ಗಾಂಧಿ, ಸರ್ದಾರ್ ವಲ್ಲಭಭಾಯ್ ಪಟೇಲ್ ಹಾಗೂ ನಾವುಗಳು ಹಿಂದೂಗಳಲ್ಲವೆ. ಆರೆಸ್ಸೆಸ್ ಸಿದ್ಧಾಂತವೇ ಬಿಜೆಪಿಯ ಸಿದ್ಧಾಂತ. ಹಿಂದುತ್ವದಲ್ಲಿ ಕಠಿಣ, ಮೃದು ಎಂಬುದು ಇರುವುದಿಲ್ಲ ಎಂದು ಅವರು ವಿಶ್ಲೇಷಿಸಿದರು.
ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆದ ಬಳಿಕ ವೈಫಲ್ಯಗಳ ಸರಮಾಲೆಯೇ ಇದ್ದು, ಸರಕಾರ ಸತ್ತಿದೆ. ಆಡಳಿತ ಯಂತ್ರ ಹಳಿ ತಪ್ಪಿದೆ. ಅಭಿವೃದ್ಧಿ ಕೆಲಸಗಳು ಸ್ಥಗಿತವಾಗಿದೆ. ಇದನ್ನು ನಾವು ಜನರಿಗೆ ತಿಳಿಸಬೇಕಾಗಿದೆ. ಇನ್ನು, ದೇಶಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ಕೊಡುಗೆ ಏನು? ಭಾವನಾತ್ಮಕ ವಿಚಾರಗಳನ್ನು ಮುಂದಿಟ್ಟಕೊಂಡು ಆಡಳಿತ ನಡೆಸುವುದನ್ನು ಬಿಟ್ಟರೆ ಯಾವುದೇ ಸಮಸ್ಯೆಗಳಿಗೆ ಮೋದಿಯವರ ಸರಕಾರದಿಂದ ಪರಿಹಾರ ಸಿಕ್ಕಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.
ಯಡಿಯೂರಪ್ಪ ರಾಜೀನಾಮೆ ನೀಡಲಿ
ಡಿ ನೋಟಿಫಿಕೇಷನ್ ಪ್ರಕರಣದಲ್ಲಿ ಕೋರ್ಟ್ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಛೀಮಾರಿ ಹಾಕಿ 25 ಸಾವಿರ ದಂಡ ವಿಧಿಸಿದೆ. ಅವರಿಗೆ ಮರ್ಯಾದೆ ಇದ್ದರೆ ಕೂಡಲೇ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಇಂಥ ಲಜ್ಜೆಗೆಟ್ಟ ಸರಕಾರ ರಾಜ್ಯದ ಇತಿಹಾಸದಲ್ಲಿ ಎಂದೂ ಬಂದಿರಲಿಲ್ಲ.
-ಸಿದ್ದರಾಮಯ್ಯ, ವಿರೋಧ ಪಕ್ಷದ ನಾಯಕ







