ಅಮೆರಿಕ ಹಿಂಸಾಚಾರ: ಪೊಲೀಸ್ ಅಧಿಕಾರಿ ಸಾವು
ಮೃತರ ಸಂಖ್ಯೆ 5ಕ್ಕೆ, ಮುಂದುವರಿದ ರಾಜೀನಾಮೆ ಪರ್ವ

ವಾಷಿಂಗ್ಟನ್, ಜ.8: ಅಮೆರಿಕ ಸಂಸತ್ತಿನ ಮೇಲೆ ಟ್ರಂಪ್ ಬೆಂಬಲಿಗರು ನಡೆಸಿದ ದಾಳಿ ಮತ್ತು ಹಿಂಸಾಚಾರಕ್ಕೆ ಸಂಬಂಧಿಸಿ ನಡೆದ ಘಟನೆಯಲ್ಲಿ ಮೃತಪಟ್ಟವರ ಸಂಖ್ಯೆ 5ಕ್ಕೇರಿದೆ. ಕರ್ತವ್ಯ ನಿರ್ವಹಿಸುತ್ತಿದ್ದಾಗ ಗಾಯಗೊಂಡಿದ್ದ ಪೊಲೀಸ್ ಅಧಿಕಾರಿ ಬ್ರಯಾನ್ ಡಿ ಸಿಕ್‌ನಿಕ್ ಆಸ್ಪತ್ರೆಯಲ್ಲಿ ಮೃತಪಟ್ಟಿರುವುದಾಗಿ ಯುಎಸ್ ಕ್ಯಾಪಿಟಲ್ ಪೊಲೀಸ್ ವಿಭಾಗ ಹೇಳಿದೆ.
ಈ ಮಧ್ಯೆ ಗುರುವಾರ ಆರಂಭವಾದ ಅಧಿಕಾರಿಗಳ ರಾಜೀನಾಮೆ ಪರ್ವ ಶುಕ್ರವಾರವೂ ಮುಂದುವರಿದಿದೆ. ಕ್ಯಾಪಿಟಲ್ ಪೊಲೀಸ್ ವಿಭಾಗದ ಮುಖ್ಯಸ್ಥ ಸ್ಟೀವನ್ ಸುಂದ್, ನಿರ್ಗಮನಾಧ್ಯಕ್ಷ ಟ್ರಂಪ್‌ರ ಸಂಪುಟದ ಸಾರಿಗೆ ಕಾರ್ಯದರ್ಶಿ ಎಲಾನಿ ಚಾವೊ ಮತ್ತು ಶಿಕ್ಷಣ ಕಾರ್ಯದರ್ಶಿ ಬೆಟ್ಸಿ ಡೆವೊಸ್, ಆರೋಗ್ಯ ಮತ್ತು ಮಾನವೀಯ ಸೇವೆ ಇಲಾಖೆಯ ಸಹಾಯಕ ಕಾರ್ಯದರ್ಶಿ ಢಾ ಎಲಿನೋರ್ ಮೆಕನ್ಸೆಟ್ , ರಾಷ್ಟ್ರೀಯ ಭದ್ರತಾ ಸಮಿತಿಯ ಹಿರಿಯ ನಿರ್ದೇಶಕ ಅಂತೋನಿಯೊ ರುಗೇರೊ ಶುಕ್ರವಾರ ರಾಜೀನಾಮೆ ಸಲ್ಲಿಸಿದ್ದಾರೆ.
ಶ್ವೇತಭವನದ ಸಹಾಯಕ ಮಾಧ್ಯಮ ಕಾರ್ಯದರ್ಶಿ ಸಾರಾ ಮ್ಯಾಥ್ಯೂಸ್, ರಾಷ್ಟ್ರೀಯ ಭದ್ರತಾ ಸಹಾಯಕ ಸಲಹೆಗಾರ ಮ್ಯಾಟ್ ಪೊಟಿಂಗರ್ ಸಹಿತ ಹಲವು ಸಿಬ್ಬಂದಿಗಳು ಹಾಗೂ ಅಧಿಕಾರಿಗಳು ಗುರುವಾರ ರಾಜೀನಾಮೆ ಪ್ರಕಟಿಸಿದ್ದರು. ವಾಷಿಂಗ್ಟನ್ ಡಿಸಿಯಲ್ಲಿ ಕಳೆದ 30 ವರ್ಷದಿಂದ ಕಾನೂನು ಸುವ್ಯವಸ್ಥೆಯ ಕರ್ತವ್ಯ ನಿರ್ವಹಿಸಿದ್ದರೂ ಕ್ಯಾಪಿಟಲ್ ಹಿಲ್ ಮೇಲೆ ನಡೆದ ಹಿಂಸಾತ್ಮಕ ದಾಳಿ ಯಂತಹ ಪ್ರಕರಣ ಇದುವರೆಗೆ ಎದುರಾಗಿರಲಿಲ್ಲ ಎಂದು ರಾಜೀನಾಮೆ ಸಲ್ಲಿಸಿದ ಬಳಿಕ ಕ್ಯಾಪಿಟಲ್ ಪೊಲೀಸ್ ಮುಖ್ಯಸ್ಥ ಸ್ಟೀವನ್ ಸುಂದ್ ಪ್ರತಿಕ್ರಿಯಿಸಿದ್ದಾರೆ. ಹಿಂಸಾತ್ಮಕ ದಾಳಿ ಪ್ರಕರಣವನ್ನು ನಿವಾರಿಸಬಹುದಿತ್ತು. ಈ ಪ್ರಕರಣದಿಂದ ತೀವ್ರ ಆಘಾತವಾಗಿದೆ ಎಂದು ಎಲಾನಿ ಚಾವೊ ಪ್ರತಿಕ್ರಿಯಿಸಿದ್ದರೆ, ಗುರುವಾರದ ಘಟನೆಗಳ ಬಗ್ಗೆ ನಮ್ಮ ದೇಶ ಕಲ್ಪನೆಯನ್ನೂ ಮಾಡಿರಲಿಲ್ಲ ಎಂದು ಬೆಟ್ಸಿ ಡೆವೊಸ್ ಪ್ರತಿಕ್ರಿಯಿಸಿದ್ದಾರೆ.







