ಅರೆಸೈನಿಕ ಪಡೆಯ ನಾಯಕನ ಹತ್ಯೆ ಪ್ರಕರಣ: ಇರಾಕ್ ಕೋರ್ಟ್‌ನಿಂದ ಟ್ರಂಪ್‌ಗೆ ಬಂಧನ ವಾರಂಟ್

ಬಗ್ದಾದ್,ಜ.8: ಇರಾನ್‌ನ ಸೇನಾ ಜನರಲ್ ಖಾಸಿಂ ಸುಲೈಮಾನಿ ಅವರನ್ನು ಕಳೆದ ವರ್ಷದ ಜನವರಿಯಲ್ಲಿ ಅಮೆರಿಕವು ಬಗ್ದಾದ್‌ನಲ್ಲಿ ವಾಯುದಾಳಿ ನಡೆಸಿ ಹತ್ಯೆಗೈದ ಘಟನೆಯ ಸಂದರ್ಭ ಇರಾಕ್‌ನ ಅರೆಸೈನಿಕ ಪಡೆಯ ನಾಯಕ ಅಬು ಮಹದಿ ಅಲ್ ಮುಹಾನ್ದಿಸ್ ಸಾವಿಗೀಡಾದ ಪ್ರಕರಣಕ್ಕೆ ಸಂಬಂಧಿಸಿ ಇರಾಕಿ ನ್ಯಾಯಾಲಯವೊಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಬಂಧನಕ್ಕೆ ಗುರುವಾರ ವಾರಂಟ್ ಹೊರಡಿಸಿದೆ.
‘‘ ಅಬು ಮಹದಿ ಅವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಪ್ರಾಥಮಿಕ ತನಿಖಾ ವಿಧಿವಿಧಾನಗಳನ್ನು ಪೂರ್ಣಗೊಳಿಸಿದ ಬಳಿಕ ನ್ಯಾಯಾಧೀಶರು ಅಮೆರಿಕದ ನಿರ್ಗಮನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಬಂಧನಕ್ಕೆ ವಾರಂಟ್ ಜಾರಿಗೊಳಿಸಿದ್ದಾರೆ’’ ಎಂದು ಇರಾಕ್‌ನ ಸರ್ವೋಚ್ಚ ನ್ಯಾಯಾಂಗ ಮಂಡಳಿ ಪ್ರಕಟಿಸಿದ ಹೇಳಿಕೆಯೊಂದು ತಿಳಿಸಿದೆ.
ಈ ಅಪರಾಧವನ್ನು ಕಾರ್ಯಗತಗೊಳಿಸುವಲ್ಲಿ ಇತರರು ಕೂಡಾ ಭಾಗಿಯಾಗಿದ್ದಾರೆಯೇ ಮತ್ತು ಅವರು ಇರಾಕಿ ಪ್ರಜೆಗಳೇ ಅಥವಾ ವಿದೇಶೀಯರೇ ಎಂಬುದನ್ನು ಪತ್ತೆ ಹಚ್ಚಲು ತನಿಖೆ ಮುಂದುವರಿಯಲಿದೆ’’ ಎಂದು ಹೇಳಿಕೆ ತಿಳಿಸಿದೆ.
ಅಬು ಮಹದಿ ಅವರು ‘ಪಾಪ್ಯುಲರ್ ಮೊಬಿಲೈಸೇಶನ್ ಫೋರ್ಸಸ್’ ಎಂದೇ ಹೆಸರಾದ ಇರಾನ್ ಬೆಂಬಲಿತ ಇರಾಕಿ ಅರೆಸೈನಿಕ ಪಡೆಯ ಉಪಮುಖ್ಯಸ್ಥರಾಗಿದ್ದರು. ಬಾಗ್ದಾದ್ ಅಂತಾರಾಷ್ಟ್ರೀಯ ವಿಮಾನದ ಬಳಿ ಅಮೆರಿಕ ಪಡೆಗಳು ನಡೆಸಿದ ವಾಯುದಾಳಿಯಲ್ಲಿ ಖಾಸೀಂ ಸುಲೈಮಾನಿ ಜೊತೆ ಅಬು ಮಹದಿ ಕೂಡಾ ಸಾವನ್ನಪ್ಪಿದ್ದರು.
ಸುಲೈಮಾನಿ ಅವರು ಇರಾನ್‌ನ ರೆವೆಲ್ಯೂಶನರಿ ಗಾರ್ಡ್ ಪಡೆಗಳ ಘಟಕವಾದ ಕುದ್ಸ್ ಫೋರ್ಸ್‌ನ ವರಿಷ್ಠರಾಗಿದ್ದರು. ಈ ವಾಯುದಾಳಿಯನ್ನು ನಡೆಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆದೇಶಿಸಿದ್ದರು ಎಂಬುದನ್ನು ಆ ಬಳಿಕ ಪೆಂಟಗಾನ್ ಅಧಿಕಾರಿಗಳು ದೃಢಪಡಿಸಿದ್ದರು.
‘ಪಾಪ್ಯುಲರ್ ಮೊಬಿಲೈಸೇಶನ್ ಫೋರ್ಸ್’, ಇರಾನ್ ಜೊತೆ ನಿಕಟವಾದ ನಂಟುಗಳನ್ನು ಹೊಂದಿರುವ ಇರಾಕಿ ಬಂಡುಕೋರರನ್ನು ಒಳಗೊಂಡಿವೆ. 2016ರಲ್ಲಿ ಇರಾಕಿ ಕಾನೂನೊಂದು ಈ ಪಡೆಯನ್ನು ಸ್ವತಂತ್ರ ಮಿಲಿಟರಿ ಸೇನೆಯೆಂದು ಮಾನ್ಯತೆ ನೀಡಿತ್ತು.
ಸುಲೈಮಾನಿ ಹಾಗೂ ಅಲ್-ಮಹಾನ್ದಿಸ್ ಅವರ ಹತ್ಯೆಗಳು ಅಕ್ರಮ ಹಾಗೂ ನಿರಂಕುಶ ಎಂದು ಕಾನೂನುಬಾಹಿರ ಹಾಗೂ ನಿರಂಕುಶ ಹತ್ಯೆಗಳ ಕುರಿತಾದವಿಶ್ವಸಂಸ್ಥೆಯ ವಿಶೇಷ ಅಧಿಕಾರಿ ಆ್ಯಗ್ನೆಸ್‌ಕ್ಯಾಲಾಮರ್ಡ್ ಬಣ್ಣಿಸಿದ್ದರು.
ಇರಾಕ್ ಅಲ್ಲದೆ ಇರಾನ್‌ಕೂಡಾ ಈ ಘಟನೆಗೆ ಸಂಬಂಧಿಸಿ ಟ್ರಂಪ್ ಹಾಗೂ ಇತರ 30 ಅಮೆರಿಕ ಅಧಿಕಾರಿಗಳಿಗೆ ಬಂಧನ ವಾರಂಟ್ ಜಾರಿಗೊಳಿಸಿತ್ತು.
ಇಬ್ಬರು ಸೇನಾ ಮುಖಂಡರ ಹತ್ಯೆಯ ಬಳಿಕ ಟ್ರಂಪ್ ಹೇಳಿಕೆ ನೀಡಿ, ‘ಒಬ್ಬನ ಬೆಲೆಯಲ್ಲಿ ಇಬ್ಬರನ್ನು ಬಲಿತೆಗೆದುಕೊಳ್ಳಲಾಗಿದೆ ’ ಎಂದು ತಿಳಿಸಿದ್ದರು ಮತ್ತು ಸುಲೈಮಾನಿ ಭಯೋತ್ಪಾದಕನೆಂದು ಬಣ್ಣಿಸಿದ್ದರು. ಆದರೆ ಆತ ಅಮೆರಿಕಕ್ಕೆ ತಕ್ಷಣದ ಬೆದರಿಕೆಯಾಗಿರಲಿಲ್ಲವೆಂದು ಹೇಳಿದ್ದರು. ಆದರೆ ಅಮೆರಿಕ ಆಡಳಿತ ಅಧಿಕಾರಿಗಳು ಸುಲೈಮಾನಿಯು ಅಮೆರಿಕಕ್ಕೆ ತಕ್ಷಣದ ಬೆದರಿಕೆಯಾಗಿದ್ದರು ಎಂದು ಹೇಳಿದ್ದರು.
2020ರ ಜನವರಿಯಲ್ಲಿ ಬಗ್ದಾದ್‌ನಲ್ಲಿರುವ ಅಮೆರಿಕ ರಾಯಭಾರಿ ಕಚೇರಿಯ ಮೇಲೆ ನಡೆದ ಕ್ಷಿಪಣಿ ದಾಳಿಯಲ್ಲಿ ಇರಾನ್‌ನ ಕೈವಾಡವಿದೆಯೆಂದು ಟ್ರಂಪ್ ಆರೋಪಿಸಿದ್ದರು.







