ಇಟಲಿ: ಆಸ್ಪತ್ರೆಯ ಹೊರಗೆ ನಿಲ್ಲಿಸಿದ್ದ ಕಾರುಗಳನ್ನು ನುಂಗಿದ ಭೂಮಿ!

ರೋಮ್: ಇಟಲಿಯ ನೇಪಲ್ಸ್ ನ ಆಸ್ಪತ್ರೆಯ ಹೊರಗೆ ಕಾರು ಪಾರ್ಕಿನ ದೊಡ್ಡ ಭಾಗವೊಂದು ಕುಸಿದ ಪರಿಣಾಮ ಹಲವಾರು ಕಾರುಗಳು ಭೂಮಿಯಾಳದಲ್ಲಿ ಸೇರಿಕೊಂಡಿರುವ ಘಟನೆ ನಡೆದಿದೆ. ಈ ಘಟನೆಯ ಬಳಿಕ ಆಸ್ಪತ್ರೆಗೆ ನೀರು ಹಾಗೂ ವಿದ್ಯುತ್ ಸರಬರಾಜು ವ್ಯವಸ್ಥೆಯು ಕಡಿತಗೊಂಡಿದೆ. ಹೀಗಾಗಿ ರೋಗಿಗಳನ್ನು ಆಸ್ಪತ್ರೆಯಿಂದ ಸ್ಥಳಾಂತರಿಸಬೇಕಾಯಿತು.
ಸುಮಾರು 500 ಚದರ ಮೀಟರ್ (5,400 ಚದರ ಅಡಿ)ಅಳತೆಯ ಸಿಂಕ್ ಹೋಲ್ ಗೆ ಹಲವಾರು ಕಾರುಗಳು ಬಿದ್ದರೂ ಘಟನೆಯಲ್ಲಿ ಯಾರಿಗೂ ಗಾಯವಾಗಿಲ್ಲ ಎಂದು ಇಟಲಿ ಅಗ್ನಿಶಾಮಕ ಸಿಬ್ಬಂದಿಗಳು ತಿಳಿಸಿದ್ದಾರೆ.
ಅದೃಷ್ಟವಶಾತ್ ಈ ಘಟನೆಯಿಂದಾಗಿ ಸಿಸ್ಟಮ್ ಇಂಜಿನಿಯರಿಂಗ್ ವಿಶೇಷವಾಗಿ ಮನುಷ್ಯರ ಜೀವ ಹಾನಿ ಉಂಟಾಗಿಲ್ಲ ಎಂದ ಕ್ಯಾಂಪಾನಿಯಾ ಪ್ರದೇಶದ ಮುಖ್ಯಸ್ಥ ವಿನ್ಸೆಂಝೊ ಡಿ ಲುಕಾ ಹೇಳಿದರು.
ಕಳೆದ ವರ್ಷ ಕೊರೋನ ವೈರಸ್ ಕಾಣಿಸಿಕೊಂಡಿದ್ದಾಗ ಈ ಆಸ್ಪತ್ರೆಯು ಕೊರೋನ ರೋಗಿಗಳ ಕೇಂದ್ರವಾಗಿತ್ತು. ಆದರೆ ಶುಕ್ರವಾರ ಘಟನೆ ನಡದಾಗ ಆಸ್ಪತ್ರೆಯಲ್ಲಿ ಕೇವಲ ಆರು ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿತ್ತು.
ಬಿಸಿ ನೀರು ಹಾಗೂ ವಿದ್ಯುತ್ ಕೊರತೆಯಿಂದಾಗಿ ವಾರ್ಡ್ ಗಳು ತಾತ್ಕಾಲಿಕವಾಗಿ ಮುಚ್ಚಲ್ಪಟ್ಟಿವೆ ಎಂದು ಸ್ಥಳೀಯ ಆರೋಗ್ಯ ಸೇವೆ ತಿಳಿಸಿದೆ.







