ಟ್ರಂಪ್ ತನಗೆ ತಾನೇ ಕ್ಷಮಾದಾನ ನೀಡುವರೇ?
ಕ್ಷಮಾದಾನದ ಪಟ್ಟಿಯಲ್ಲಿ ಕುಟುಂಬ ಸದಸ್ಯರು, ಅಧಿಕಾರಿಗಳು

ವಾಶಿಂಗ್ಟನ್, ಜ. 8: ತನ್ನ ಅಧಿಕಾರಾವಧಿಯ ಕೊನೆಯ ದಿನಗಳಲ್ಲಿ ಕ್ಷಮಾದಾನ ನೀಡುವ ವ್ಯಕ್ತಿಗಳ ಪಟ್ಟಿಯೊಂದನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಿದ್ಧಪಡಿಸಿದ್ದಾರೆ ಎಂದು ಬಲ್ಲ ಮೂಲವೊಂದು ತಿಳಿಸಿದೆ ಎಂದು ‘ಬ್ಲೂಮ್‌ಬರ್ಗ್’ ವರದಿ ಮಾಡಿದೆ.
ಈ ಪಟ್ಟಿಯಲ್ಲಿ ಶ್ವೇತಭವನದ ಹಿರಿಯ ಅಧಿಕಾರಿಗಳು, ಕುಟುಂಬ ಸದಸ್ಯರು, ಖ್ಯಾತ ಸಂಗೀತಗಾರರು ಇದ್ದಾರೆ ಎನ್ನಲಾಗಿದೆ. ಪಟ್ಟಿಯಲ್ಲಿ ಟ್ರಂಪ್ ಹೆಸರು ಇರುವ ಸಾಧ್ಯತೆಯನ್ನೂ ತಳ್ಳಿಹಾಕುವಂತಿಲ್ಲ ಎಂದು ಮೂಲ ಹೇಳಿದೆ.
ತನ್ನ ಅಧಿಕಾರಾವಧಿಯ ಕೊನೆಯ ಪೂರ್ಣ ದಿನವಾಗಿರುವ ಜನವರಿ 19ರಂದು ಅವರು ಈ ವ್ಯಕ್ತಿಗಳಿಗೆ ಕ್ಷಮಾದಾನವನ್ನು ಘೋಷಿಸುವರೆಂದು ನಿರೀಕ್ಷಿಸಲಾಗಿದೆ.
ಅವರ ಕಾನೂನು ತಂಡ ಎದುರಿಸುತ್ತಿರುವ ದೊಡ್ಡ ಪ್ರಶ್ನೆಯೆಂದರೆ, ತನಗೆ ತಾನೇ ಕ್ಷಮಾದಾನ ನೀಡುವ ಅಧಿಕಾರ ಅಧ್ಯಕ್ಷರಿಗಿದೆಯೇ ಎನ್ನುವುದು. ಈ ವಿಷಯದಲ್ಲಿ ಅವರು ಇತ್ತೀಚಿನ ವಾರಗಳಲ್ಲಿ ತನ್ನ ಹಿರಿಯ ಸಲಹೆಗಾರರೊಂದಿಗೆ ಚರ್ಚಿಸಿದ್ದಾರೆ ಎನ್ನಲಾಗಿದೆ.
ತನಗೆ ಈ ಅಧಿಕಾರವಿದೆ ಎಂಬುದಾಗಿ ಟ್ರಂಪ್ ಈಗಾಗಲೇ ಹೇಳಿಕೊಂಡಿದ್ದಾರೆ. ಆದರೆ, ಅದು ಕಾನೂನು ಸಂಬಂಧಿ ವಿವಾದವಾಗುವ ಸಾಧ್ಯತೆಯಿದೆ. ಅಮೆರಿಕದ ಈವರೆಗಿನ ಯಾವುದೇ ಅಧ್ಯಕ್ಷರು ಈ ಬಗ್ಗೆ ಪ್ರಯತ್ನಿಸಿಲ್ಲ.
ಆದರೆ, ಸ್ವಯಂ-ಕ್ಷಮಾದಾನವು ಟ್ರಂಪ್ ಇನ್ನೊಮ್ಮೆ ಅಧ್ಯಕ್ಷ ಹುದ್ದೆಗೆ ಸ್ಪರ್ಧಿಸಿದರೆ ಮುಳುವಾಗುವ ಸಾಧ್ಯತೆಯಿದೆ. ಇದು ತಾನು ತಪ್ಪು ಮಾಡಿದ್ದೇನೆ ಎನ್ನುವುದನ್ನು ಸ್ವತಃ ಟ್ರಂಪ್ ಒಪ್ಪಿಕೊಂಡಂತಾಗುತ್ತದೆ. ಅದನ್ನು ಪ್ರತಿಪಕ್ಷಗಳು ಚುನಾವಣಾ ಸಂದರ್ಭದಲ್ಲಿ ಬಳಸಿಕೊಳ್ಳಬಹುದಾಗಿದೆ.