ಅರಣ್ಯಾಧಿಕಾರಿಗಳ ಮೇಲೆ ದಾಳಿಗಳ ಕುರಿತು ಸುಪ್ರೀಂ ಕೋರ್ಟ್ ಕಳವಳ
ಶಸ್ತ್ರಾಸ್ತ್ರಗಳನ್ನು ಒದಗಿಸುವಂತೆ ಆದೇಶಿಸುವ ಸುಳಿವು

ಹೊಸದಿಲ್ಲಿ,ಜ.8: ಶಸ್ತ್ರಸಜ್ಜಿತ ಕಳ್ಳ ಬೇಟೆಗಾರರು ಮತ್ತು ಕಳ್ಳ ಸಾಗಾಣಿಕೆದಾರರಿಂದ ಅರಣ್ಯ ಇಲಾಖೆಯ ರೇಂಜರ್‌ಗಳ ಮೇಲೆ ನಡಯುತ್ತಿರುವ ದಾಳಿಗಳ ಕುರಿತು ಶುಕ್ರವಾರ ತೀವ್ರ ಕಳವಳವನ್ನು ವ್ಯಕ್ತಪಡಿಸಿರುವ ಸರ್ವೋಚ್ಚ ನ್ಯಾಯಾಲಯವು,ಈ ಅಧಿಕಾರಿಗಳ ಸುರಕ್ಷತೆಯನ್ನು ಖಚಿತಪಡಿಸಲು ಅವರಿಗೆ ಬಂದೂಕುಗಳು,ಗುಂಡು ನಿರೋಧಕ ಕವಚಗಳು ಮತ್ತು ಹೆಲ್ಮೆಟ್‌ಗಳನ್ನು ಒದಗಿಸುವಂತೆ ತಾನು ಆದೇಶಿಸಬಹುದು ಎಂದು ತಿಳಿಸಿದೆ.
ಅರಣ್ಯಾಧಿಕಾರಿಗಳು ಬಲಾಢ್ಯ ಶಕ್ತಿಗಳ ವಿರುದ್ಧ ಸೆಣಸುತ್ತಿದ್ದಾರೆ ಮತ್ತು ಕಳ್ಳ ಸಾಗಾಣಿಕೆಯ ಮೂಲಕ ಮಿಲಿಯಗಟ್ಟಲೆ ಡಾಲರ್‌ಗಳನ್ನು ಕೊಳ್ಳೆ ಹೊಡೆಯಲಾಗುತ್ತಿದೆ ಎಂದು ಹೇಳಿದ ಮುಖ್ಯ ನ್ಯಾಯಮೂರ್ತಿ ಎಸ್.ಎ.ಬೋಬ್ಡೆ ನೇತೃತ್ವದ ಪೀಠವು,ಜಾರಿ ನಿರ್ದೇಶನಾಲಯ (ಈ.ಡಿ.)ವನ್ನು ಬಳಸಿಕೊಳ್ಳಬೇಕಿದೆ. ಅದು ಪ್ರತ್ಯೇಕ ವನ್ಯಜೀವಿ ಘಟಕವನ್ನು ಅಗತ್ಯವಾಗಿ ಹೊಂದಿರಬೇಕು. ಕಳ್ಳ ಸಾಗಾಣಿಕೆದಾರರ ಬಳಿ ಇರುವ ಎಲ್ಲ ಹಣ ಅಪರಾಧ ಮೂಲದ್ದೇ ಆಗಿದೆ ಎಂದು ತಿಳಿಸಿತು.
ಪೀಠವು 25 ವರ್ಷಗಳ ಹಿಂದೆ ಗೋದವರ್ಮನ್ ತಿರುಮಲಪಾದ ಎನ್ನುವವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಸಂಬಂಧಿಸಿದಂತೆ ಸಲ್ಲಿಕೆಯಾಗಿರುವ ಮಧ್ಯಂತರ ಅರ್ಜಿಗಳ ವಿಚಾರಣೆಯನ್ನು ನಡೆಸುತ್ತಿದೆ.
ಅರಣ್ಯಾಧಿಕಾರಿಗಳ ಮೇಲಿನ ಶೇ.38ರಷ್ಟು ದಾಳಿ ಘಟನೆಗಳು ಭಾರತದಲ್ಲಿಯೇ ನಡೆಯುತ್ತಿವೆ ಎಂದು ನ್ಯಾಯಾಲಯಕ್ಕೆ ತಿಳಿಸಿದ ಹಿರಿಯ ನ್ಯಾಯವಾದಿ ಶ್ಯಾಮ್ ದಿವಾನ್ ಅವರು,ರಾಜಸ್ಥಾನ, ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರಗಳ ಅರಣ್ಯಗಳಲ್ಲಿ ರೇಂಜರ್‌ಗಳ ಮೇಲಿನ ದಾಳಿ ಪ್ರಕರಣಗಳನ್ನು ಪ್ರಸ್ತಾಪಿಸಿ,ಫಾರೆಸ್ಟ್ ರೇಂಜರ್‌ಗಳ ಮೇಲೆ ಕ್ರೂರ ದಾಳಿಗಳು ನಡೆಯುತ್ತಿವೆ. ಅವರ ವಿರುದ್ಧ ಪ್ರತಿದೂರುಗಳೂ ದಾಖಲಾಗುತ್ತಿವೆ ಎನ್ನುವುದನ್ನು ಗಮನಕ್ಕೆ ತಂದರು.
ಅಸ್ಸಾಮಿನಲ್ಲಿ ಅರಣ್ಯಾಧಿಕಾರಿಗಳಿಗೆ ಶಸ್ತ್ರಾಸ್ತ್ರಗಳನ್ನು ನೀಡಲಾಗಿದ್ದರೆ ಮಹಾರಾಷ್ಟ್ರದಲ್ಲಿ ಅವರಿಗೆ ಲಾಠಿಯನ್ನು ಮಾತ್ರ ನೀಡಲಾಗಿದೆ ಎಂದು ಪೀಠವು ಈ ಸಂದರ್ಭ ತಿಳಿಸಿತು.
ಫಾರೆಸ್ಟ್ ರೇಂಜರ್‌ಗಳನ್ನು ಹೇಗೆ ರಕ್ಷಿಸಬಹುದು ಎನ್ನುವುದರ ಬಗ್ಗೆ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ,ದಿವಾನ್ ಮತ್ತು ವಕೀಲ ಎಡಿಎನ್ ರಾವ್ ಅವರು ಹೇಳಿಕೆಗಳನ್ನು ನೀಡಿದ ಬಳಿಕ ಈ ವಿಷಯದಲ್ಲಿ ಆದೇಶವೊಂದನ್ನು ನಾವು ಹೊರಡಿಸುತ್ತೇವೆ ಎಂದು ಹೇಳಿದ ಪೀಠವು,ಅರಣ್ಯಾಧಿಕಾರಿಗಳಿಗೆ ಬಂದೂಕುಗಳು,ಗುಂಡು ನಿರೋಧಕ ಕವಚಗಳು ಮತ್ತು ಹೆಲ್ಮೆಟ್‌ಗಳನ್ನು ಒದಗಿಸುವಂತೆ ನಾವು ನಿರ್ದೇಶ ನೀಡುತ್ತೇವೆ. ಕರ್ನಾಟಕದಲ್ಲಿ ಅರಣ್ಯ ಸಿಬ್ಬಂದಿಗಳು ಚಪ್ಪಲಿಗಳನ್ನು ಧರಿಸಿ ಅರಣ್ಯದಲ್ಲಿ ಗಸ್ತು ನಿರ್ವಹಿಸುವುದು ಮತ್ತು ಕಳ್ಳ ಬೇಟೆಗಾರರು ಅವರ ಮೇಲೆ ಹಲ್ಲೆಗಳನ್ನು ನಡೆಸುತ್ತಿರುವುದು ಕಂಡು ಬಂದಿದೆ. ಸಾಲಿಸಿಟರ್ ಜನರಲ್ ಅವರು ಅರಣ್ಯ ಇಲಾಖೆ ಸಿಬ್ಬಂದಿಗಳಿಗೆ ಬಂದೂಕುಗಳನ್ನು ಒದಗಿಸುವ ಕುರಿತು ಮುಂದಿನ ವಿಚಾರಣೆಯ ವೇಳೆ ಹೇಳಿಕೆಯನ್ನು ನೀಡಬೇಕು ಎಂದು ತಿಳಿಸಿತು.
ವಿಶಾಲ ಅರಣ್ಯ ಪ್ರದೇಶಗಳಲ್ಲಿ ನಿರಾಯುಧರಾಗಿ ಕಾರ್ಯ ನಿರ್ವಹಿಸುವ ಅರಣ್ಯಾಧಿಕಾರಿಗಳು ಶಸ್ತ್ರಸಜ್ಜಿತ ಕಳ್ಳ ಬೇಟೆಗಾರರ ವಿರುದ್ಧ ಯಾವುದೇ ಕಾನೂನನ್ನು ಜಾರಿಗೊಳಿಸುವುದೂ ಕಷ್ಟವಾಗಿದೆ. ಸಂಕಷ್ಟದ ಸಮಯದಲ್ಲಿ ನೆರವಿಗಾಗಿ ಕರೆ ಮಾಡಲೂ ಅವರಿಗೆ ಸಾಧ್ಯವಾಗುವುದಿಲ್ಲ. ನಗರ ಪ್ರದೇಶಗಳಲ್ಲಿ ನೆರವಿಗಾಗಿ ಪೊಲೀಸರಿಗೆ ಕರೆ ಮಾಡುವಂತೆ ಅರಣ್ಯ ಪ್ರದೇಶಗಳಲ್ಲಿಯೂ ಏನಾದರೂ ವ್ಯವಸ್ಥೆಗಳಿರಬೇಕು ಎಂದು ಪೀಠವು ಹೇಳಿತು.







