ಹೊಸದಾಗಿ ಜಾರಿಗೆ ತಂದಿರುವ ಕೃಷಿ ಕಾನೂನು ರದ್ದುಪಡಿಸುವ ಪ್ರಶ್ನೆಯೇ ಇಲ್ಲ : ಕೇಂದ್ರ ಸರ್ಕಾರ
'ಸುಪ್ರೀಂಕೋರ್ಟ್ ನಿರ್ಧರಿಸಲಿ'

ಹೊಸದಿಲ್ಲಿ: ಹೊಸದಾಗಿ ಜಾರಿಗೆ ತಂದಿರುವ ಕೃಷಿ ಕಾನೂನುಗಳನ್ನು ರದ್ದುಪಡಿಸುವ ಪ್ರಶ್ನೆಯೇ ಇಲ್ಲ; ಮಾತುಕತೆ ನನೆಗುದಿಗೆ ಬಿದ್ದಿರುವ ಹಿನ್ನೆಲೆಯಲ್ಲಿ ಇದನ್ನು ಸುಪ್ರೀಂಕೋರ್ಟ್‌ಗೆ ಬಿಟ್ಟುಬಿಡುವುದು ಸೂಕ್ತ ಎಂದು ಕೇಂದ್ರ ಸರ್ಕಾರ ಶುಕ್ರವಾರ ಪ್ರಕಟಿಸಿದೆ. ಇದರೊಂದಿಗೆ ಸಮಸ್ಯೆ ಮತ್ತಷ್ಟು ಕಗ್ಗಂಟಾಗಿದೆ.
ಕೇಂದ್ರ ಹೊಸದಾಗಿ ಜಾರಿಗೆ ತಂದಿರುವ ಕೃಷಿ ಕಾಯ್ದೆ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರ ಜತೆ ಎಂಟು ಸುತ್ತುಗಳ ಮಾತುಕತೆಯೂ ವಿಫಲವಾಗಿದ್ದು, ಕೃಷಿ ಕಾಯ್ದೆ ರದ್ದುಪಡಿಸದೇ ಮನೆಗೆ ವಾಪಸ್ಸಾಗುವುದಿಲ್ಲ ಎಂದು ರೈತರು ಪಟ್ಟು ಹಿಡಿದಿದ್ದಾರೆ.
ರೈತ ಸಂಘಟನೆಗಳ ಜತೆಗೆ ಮಾತುಕತೆ ಪ್ರಗತಿಯಲ್ಲಿದ್ದು, ಈ ಬಗ್ಗೆ ಅಧಿಕೃತ ಪ್ರತಿಕ್ರಿಯೆ ನೀಡುವಂತೆ ಒತ್ತಾಯಿಸಬಾರದು ಎಂದು ಸುಪ್ರೀಂಕೋರ್ಟ್‌ಗೆ ಕೇಂದ್ರ ಸರ್ಕಾರ ಮನವಿ ಮಾಡಿದ ಮರುದಿನವೇ ತನ್ನ ನಿರ್ಧಾರವನ್ನು ಬದಲಿಸಿ ಕಠಿಣ ನಿಲುವು ಪ್ರಕಟಿಸಿದೆ.
ಕಾಯ್ದೆಯಲ್ಲಿ ತಿದ್ದುಪಡಿ ಮಾಡಲು ಮತ್ತು ಕೆಲ ರಿಯಾಯಿತಿಗಳನ್ನು ನೀಡಲು ಸಿದ್ಧ; ಆದರೆ ಕಾನೂನು ರದ್ದುಪಡಿಸುವ ಪ್ರಶ್ನೆಯೇ ಇಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿತ್ತು.
ಮಾತುಕತೆ ಪ್ರಗತಿಯಲ್ಲಿರುವಾಗಲೇ ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್‌ನ ಮೊರೆ ಹೋಗಿದ್ದು, ಇದನ್ನು ನ್ಯಾಯಾಲಯ ನಿರ್ಧರಿಸಲಿ ಎಂದು ಕೇಂದ್ರ ಸರ್ಕಾರ ಹೇಳಿಕೆ ನೀಡಿರುವುದು ಪ್ರಜಾಪ್ರಭುತ್ವದ ಪಾಲಿಗೆ ಅತ್ಯಂತ ಕೆಟ್ಟ ದಿನ ಎಂದು ಮಹಿಳಾ ಕಿಸಾನ್ ಅಧಿಕಾರ್ ಮೋರ್ಚಾದ ಕವಿತಾ ಕುರುಗಂಟಿ ಹೇಳಿಕೆ ನೀಡಿದ್ದಾರೆ.







