ಆಸ್ಪತ್ರೆಯಲ್ಲಿ ಕಾಣಿಸಿಕೊಂಡ ಬೆಂಕಿಗೆ 10 ನವಜಾತ ಶಿಶುಗಳು ಮೃತ್ಯು

ಫೋಟೊ ಕೃಪೆ: ಎಎನ್ ಐ
ಮುಂಬೈ: ಮಹಾರಾಷ್ಟ್ರದ ಭಂಡಾರ ಜಿಲ್ಲೆಯಲ್ಲಿ ಶನಿವಾರ ತಡರಾತ್ರಿ 2 ಗಂಟೆಯ ಸುಮಾರಿಗೆ ಸರಕಾರಿ ಆಸ್ಪತ್ರೆಯಲ್ಲಿ ಕಾಣಿಸಿಕೊಂಡ ಬೆಂಕಿಯ ಕೆನ್ನಾಲಿಗೆಗೆ ಕನಿಷ್ಠ 10 ನವಜಾತ ಶಿಶುಗಳು ಮೃತಪಟ್ಟಿರುವ ಕುರಿತು ವರದಿಯಾಗಿದೆ. 'ಇದೊಂದು ಹೃದಯ ಕದಡುವ ದುರಂತ' ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಪ್ರತಿಕ್ರಿಯಿಸಿದ್ದಾರೆ.
ಮಹಾರಾಷ್ಟ್ರದ ಭಂಡಾರ ಜಿಲ್ಲೆಯ ನಾಲ್ಕು ಮಹಡಿಯ ಆಸ್ಪತ್ರೆಯ ವಿಶೇಷ ನವಜಾತ ಶಿಶು ಆರೈಕೆ ಘಟಕದಲ್ಲಿ 17 ಮಕ್ಕಳು ದಾಖಲಾಗಿದ್ದವು.
"ಆಸ್ಪತ್ರೆಯ ಹೊರಗಿನ ವಿಭಾಗದಲ್ಲಿ ತಡರಾತ್ರಿ 1:30ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿತ್ತು. ಆ ಸಮಯದಲ್ಲಿ ಮಕ್ಕಳ ವಾರ್ಡ್ನಲ್ಲಿ ಇಬ್ಬರು ನರ್ಸ್ ಗಳು ಹಾಗೂ ಹೆಲ್ಪರ್ ಗಳು ಇದ್ದರು. ಅವರು ತಕ್ಷಣವೇ ಎಚ್ಚರಿಕೆ ಗಂಟೆ ಬಾರಿಸಿದ್ದರು. ಅಗ್ನಿಶಾಮಕ ದಳದವರನ್ನು ಕರೆಸಲಾಗಿತ್ತು. ಅವರು ಆಗಮಿಸುವ ಮೊದಲೇ ಸಿಬ್ಬಂದಿಗಳು ಮಕ್ಕಳನ್ನು ರಕ್ಷಿಸಲು ಯತ್ನಿಸಿದ್ದರು. ಸಿಬ್ಬಂದಿಗಳು ಏಳು ನವಜಾತಶಿಶುಗಳನ್ನು ರಕ್ಷಿಸಿದ್ದರು'' ಎಂದು ಭಂಡಾರ ಜಿಲ್ಲಾಧಿಕಾರಿ ಸಂದೀಪ್ ಕದಮ್ ‘ದಿ ಇಂಡಿಯನ್ ಎಕ್ಸ್ಪ್ರೆಸ್’ ಗೆ ತಿಳಿಸಿದ್ದಾರೆ.
ಸಿಬ್ಬಂದಿಗಳಿಗೆ ಎಲ್ಲ ಮಕ್ಕಳನ್ನು ರಕ್ಷಿಸಲು ಸಾಧ್ಯವಾಗಲಿಲ್ಲ ಎಂದು ತಿಳಿಸಿದ ಜಿಲ್ಲಾಧಿಕಾರಿಯವರಲ್ಲಿ ಶಾರ್ಟ್-ಸಕ್ರ್ಯೂಟ್ ಬೆಂಕಿಗೆ ಸಂಭಾವ್ಯ ಕಾರಣವೇ ಎಂದು ಕೇಳಿದಾಗ, ಅದನ್ನು ಈಗಲೇ ನಿರ್ಣಯಿಸುವುದು ಅವಸರವಾಗುತ್ತದೆ ಎಂದರು.





