ಜ.16-18: ಕೆಮ್ಮಲೆ ಕ್ಷೇತ್ರದಲ್ಲಿ ಬ್ರಹ್ಮಕಲಶೋತ್ಸವ

ಮಂಗಳೂರು, ಜ.8: ಕಡಬ ತಾಲೂಕಿನ ಎಣ್ಮೂರು ಕೆಮ್ಮಲೆ ನಾಗಬ್ರಹ್ಮ ದೇವಸ್ಥಾನ, ಕೆಮ್ಮಲೆ ಬ್ರಹ್ಮರ ಮೂಲಸ್ಥಾನ ಹಾಗೂ ಉಳ್ಳಾಕುಲು ಪರಿವಾರ ದೈವಗಳ ದೈವಸ್ಥಾನದ ಪುನ: ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಜ. 16ರಿಂದ 18ರವರೆಗೆ ನಡೆಯಲಿದೆ.
ಕಂಕನಾಡಿ ಗರೋಡಿಯಲ್ಲಿಂದು ಕೆಮ್ಮಲೆ ಕ್ಷೇತ್ರದ ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿ ಮಾತನಾಡಿದ ಸಂಸದೆ ಶೋಭಾ ಕರಂದ್ಲಾಜೆ, 1. 74 ಕೋಟಿ ರೂ. ವೆಚ್ಚದಲ್ಲಿ ಕೆಮ್ಮಲೆ ಕ್ಷೇತ್ರದಲ್ಲಿ ವಿವಿದ ಅಭಿವೃದ್ದಿ ಕಾಮಗಾರಿಗಳು ನಡೆದಿವೆ ಎಂದರು.
ಜೀರ್ಣೋದ್ಧಾರಕ್ಕಾಗಿ ಸಮಿತಿಯ ಬೇಡಿಕೆಯಂತೆ ಮುಖ್ಯಮಂತ್ರಿಯವರಿಗೆ 40 ಲಕ್ಷ ರೂ. ಅನುದಾನದ ಬೇಡಿಕೆ ಇಟ್ಟಾಗ ಯಡಿಯೂರಪ್ಪನವರು 45 ಲಕ್ಷ ರೂ. ನೀಡಿದ್ದಾರೆ. ಸ್ಥಳೀಯ ಶಾಸಕರ ವಿವಿಧ ಅನುದಾನದಡಿ ಕಾಡು ಹಾದಿಯಲ್ಲಿ ರಸ್ತೆ ನಿರ್ಮಾಣವಾಗಿದೆ. ಐತಿಹ್ಯದ ಕೇಂದ್ರವಾಗಿರುವ ಈ ಕ್ಷೇತ್ರವನ್ನು ಪ್ರವಾಸೋದ್ಯಮ ಕೇಂದ್ರವನ್ನಾಗಿಸುವುದಕ್ಕಿಂತಲೂ ಮುಖ್ಯವಾಗಿ ಇಲ್ಲಿನ ಪಾವಿತ್ರವನ್ನು ಉಳಿಸಿಕೊಂಡು ಧಾರ್ಮಿಕ ಕ್ಷೇತ್ರವಾಗಿ ಅಭಿವೃದ್ಧಿಗೊಳಿಸಬೇಕಾಗಿದೆ ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಅವರು ಪ್ರತಿಕ್ರಿಯಿಸಿದರು.
ಕರಾವಳಿಯ 260 ಗರಡಿಗಳಲ್ಲಿ ಪೂಜೆ ಮಾಡುವ ಮೊದಲು ಕೆಮ್ಮಲೆಯ ಬ್ರಹ್ಮನಿಗೆ ಮೊದಲು ಆರತಿ ಮಾಡಲಾಗುತ್ತದೆ. ಇದೀಗ ನಮ್ಮ ಅವಧಿಯಲ್ಲಿ ಕೆಮ್ಮಲೆ ಕ್ಷೇತ್ರದಲ್ಲಿ ಜೀರ್ಣೋದ್ಧಾರ ಆಗುತ್ತಿರುವುದು ನಮಗೆ ದೊರಕಿರುವ ಪುಣ್ಯ. ಕಳೆದ ವರ್ಷ ಆಗಬೇಕಾಗಿದ್ದ ಬ್ರಹ್ಮಕಲ ಶೋತ್ಸವ ಕೊರೋನದಿಂದಾಗಿ ಈ ವರ್ಷ ನಡೆಯುತ್ತಿದೆ ಎಂದು ಕಂಕನಾಡಿ ಗರಡಿಯ ಅಧ್ಯಕ್ಷ ಚಿತ್ತರಂಜನ್ ಗರೋಡಿ ತಿಳಿಸಿದರು.
ಮೂರು ದಿನಗಳ ಕಾಲ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ, ಕೊರೋನ ಮುಂಜಾಗೃತಾ ಕ್ರಮಗಳನ್ನು ಪಾಲಿಸಿಕೊಂಡು ಕೆಮ್ಮಲೆ ಕ್ಷೇತ್ರದಲ್ಲಿ ಬ್ರಹ್ಮಕಲಶೋತ್ಸವ ನಡೆಯಲಿದೆ ಎಂದು ಅವರು ಹೇಳಿದರು.
ಈ ಸಂದರ್ಭ ಶಾಸಕ ವೇದವ್ಯಾಸ ಕಾಮತ್, ಮೂಡ ಅಧ್ಯಕ್ಷ ರವಿಶಂಕರ ಮಿಜಾರು, ವಿಜಯ ಕುಮಾರ್ ಶೆಟ್ಟಿ, ರಾಧಾಕೃಷ್ಣ, ಸಂದೀಪ್ ಗರೋಡಿ, ಚಂದ್ರಾವತಿ, ವೀಣಾ ಮಂಗಳ ಮೊದಲಾದವರು ಉಪಸ್ಥಿತರಿದ್ದರು.








