ಯಕ್ಷ ಕಲಾವಿದ ಸುಬ್ರಾಯ ಭಟ್ ನಿಧನ

ಉಡುಪಿ, ಜ.9: ಬಡಗುತಿಟ್ಟಿನ ಪ್ರಸಿದ್ಧ ಕಲಾವಿದ ಸುಬ್ರಾಯ ಭಟ್ ಗುಂಡಿಬೈಲ್ ಶುಕ್ರವಾರ ಅಲ್ಪಕಾಲದ ಅಸೌಖ್ಯದಿಂದ ನಿಧನ ಹೊಂದಿದರು. ಅವರಿಗೆ 71 ವರ್ಷ ವಯಸ್ಸಾಗಿತ್ತು. ಪತ್ನಿ, ಇಬ್ಬರು ಪುತ್ರರು ಮತ್ತು ಪುತ್ರಿಯನ್ನು ಅವರು ಅಗಲಿದ್ದಾರೆ.
ಗುಂಡುಬಾಳ, ಇಡಗುಂಜಿ, ಕೊಳಗಿಬೀಸ್, ಅಮೃತೇಶ್ವರೀ, ಸಾಲಿಗ್ರಾಮ, ಬಚ್ಚಗಾರು ಮತ್ತು ಶಿರಸಿ ಮೇಳಗಳಲ್ಲಿ ಐದು ದಶಕಗಳ ಕಾಲ ಕಲಾಸೇವೆ ಮಾಡಿದ್ದ ಸುಬ್ರಾಯ ಭಟ್ಟರು ಬಬ್ರುವಾಹನ, ಅತಿಕಾಯ, ಇಂದ್ರಜಿತು, ಸುಗ್ರೀವ ಹೀಗೆ ಅನೇಕ ಪೌರಾಣಿಕ ಪಾತ್ರಗಳನ್ನು ರಂಗದಲ್ಲಿ ಮೆರೆಸಿದ್ದರು. ಯಕ್ಷಗಾನ ಗುರುಗಳಾಗಿ, ಪ್ರಸಂಗಕರ್ತರಾಗಿ, ಅರ್ಥಧಾರಿಯಾಗಿಯೂ ಈ ಕ್ಷೇತ್ರಕ್ಕೆ ಕೊಡುಗೆ ನೀಡಿದ್ದಾರೆ.
ಅನೇಕ ಪ್ರಶಸ್ತಿಗಳಿಂದ ಪುರಸ್ಕೃತರಾದ ಇವರಿಗೆ ಉಡುಪಿಯ ಯಕ್ಷಗಾನ ಕಲಾರಂಗ 2016ರಲ್ಲಿ ಶಿರಿಯಾರ ಮಂಜುನಾಥ ನಾಯ್ಕ ಸ್ಮರಣಾರ್ಥ ‘ಯಕ್ಷಗಾನ ಕಲಾರಂಗ ಪ್ರಶಸ್ತಿ’ ನೀಡಿ ಗೌರವಿಸಿತ್ತು. ಭಟ್ಟರ ನಿಧನಕ್ಕೆ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
Next Story





