ಕೆಎಂಸಿ ಮಣಿಪಾಲದಲ್ಲಿ ನಿರಂತರ ಕಲಿಕಾ ಕಾರ್ಯಕ್ರಮ

ಉಡುಪಿ, ಜ.9: ವೃತ್ತಿಪರ ವೈದ್ಯರಿಗೆ ಮತ್ತು ಬೋಧನೆ ಮಾಡುವ ಎಲ್ಲಾ ವೈದ್ಯರಿಗೆ ವೈದ್ಯಕೀಯ ಶಿಕ್ಷಣವನ್ನು ಮುಂದುವರಿಸುವುದು ಮತ್ತು ವೈದ್ಯಕೀಯ ಜ್ಞಾನವನ್ನು ಹೆಚ್ಚಿಸಿಕೊಳ್ಳುವುದು ಬಹಳ ಅಗತ್ಯವಾಗಿದೆ. ಪ್ರತಿ ವಿಭಾಗಗಳು, ಉಪವಿಭಾಗಗಳು, ವಿಶೇಷ ವಿಭಾಗಗಳು ಮತ್ತು ಆಡಳಿತಾತ್ಮಕ ಅಂಶಗಳಿಗೂ ಇದು ಅನುಕೂಲಕರವಾಗಿದೆ ಎಂದು ಮಾಹೆ ಮಣಿಪಾಲದ ಕುಲಪತಿ ಲೆಫ್ಟಿನೆಂಟ್ ಜನರಲ್ ಡಾ.ಎಂ.ಡಿ.ವೆಂಕಟೇಶ್ ಹೇಳಿದ್ದಾರೆ.
ಕಸ್ತೂರ್‌ಬಾ ಆಸ್ಪತ್ರೆ ಮಣಿಪಾಲದಲ್ಲಿ ಶನಿವಾರ ಆಯೋಜಿಸಲಾದ ನಿರಂತ ಕಲಿಕಾ ಕಾರ್ಯಕ್ರಮ ‘ಕೆಎಚ್ ಲರ್ನ್’ನ್ನು ಉದ್ಘಾಟಿಸಿ ಅವರು ಮಾತನಾಡು ತಿದ್ದರು. ವಾಸ್ತವವಾಗಿ, ವೈದ್ಯಕೀಯ ಶಿಕ್ಷಣ ಕ್ಷೇತ್ರದಲ್ಲಿ ನಾಲ್ಕು ಪ್ರಮುಖ ಅಂಶಗಳನ್ನು ಒತ್ತಿಹೇಳಲಾಗಿದೆ. ಶಿಕ್ಷಕರಿಂದ ಕಲಿಯುವುದು, ಸ್ವಕಲಿಕೆ, ಜೊತೆಗಾರ ರಿಂದ ಕಲಿಕೆ ಹಾಗೂ ಜೀವನಪರ್ಯಂತ ಕಲಿಕೆ ಎಂದವರು ನುಡಿದರು.
ಗೌರವ ಅತಿಥಿಯಾಗಿ ಭಾಗವಹಿಸಿದ್ದ ಮಾಹೆ ಮಣಿಪಾಲದ ಆರೋಗ್ಯ ವಿಜ್ಞಾನ ವಿಭಾಗದ ಸಹಕುಲಪತಿ ಡಾ.ಪಿಎಲ್ಎನ್‌ಜಿ ರಾವ್ ಮಾತನಾಡಿ, ಜ್ಞಾನವು ಪ್ರತೀ ಮೂರು ವರ್ಷಗಳಿಗೂ ಕಡಿಮೆ ಅವಧಿಯಲ್ಲಿ ದ್ವಿಗುಣ ಗೊಳ್ಳುತ್ತದೆ. ಈ ಕಲಿಕಾ ಕಾರ್ಯಕ್ರಮವು ಹೊಸ ವಿಚಾರಗಳನ್ನು ಹಂಚಿಕೊಳ್ಳಲು ಮತ್ತು ಕಲಿಯಲು ಇರುವ ವೇದಿಕೆಯಾಗಿದೆ ಎಂದು ತಿಳಿಸಿದರು.
ಕಸ್ತೂರ್ಬಾ ಆಸ್ಪತ್ರೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಿ.ಜಿ. ಮುತ್ತಣ, ಡಾ.ಅನಿಲ್ ಕೆ. ಭಟ್, ಡಾ.ಕೃಷ್ಣಾನಂದ ಪ್ರಭು, ಡಾ.ಪದ್ಮರಾಜ ಹೆಗಡೆ ಉಪಸ್ಥಿತರಿದ್ದರು. ಶಸ್ತ್ರಚಿಕಿತ್ಸಾ ಕ್ಯಾನ್ಸರ್ ವಿಭಾಗದ ಮುಖ್ಯಸ್ಥ ಡಾ.ನವೀನ್ ಕುಮಾರ್ ಎ.ಎನ್. ತಮ್ಮ ವಿಭಾಗದಲ್ಲಿ ನಡೆಸುತ್ತಿರುವ ಅಪರೂಪದ ಶಸ್ತ್ರಚಿಕಿತ್ಸೆಗಳ ಕುರಿತು ಮಾತನಾಡಿದರು. ಕಸ್ತೂರ್ಬಾ ಆಸ್ಪತ್ರೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಿ.ಜಿ. ಮುತ್ತಣ, ಡಾ.ಅನಿಲ್ ಕೆ., ಡಾ.ಕೃಷ್ಣಾನಂದ, ಡಾ.ಪದ್ಮರಾಜ ಹೆಗಡೆ ಉಪಸ್ಥಿತರಿದ್ದರು.
ಕೆಎಂಸಿಯ ಡೀನ್ ಡಾ.ಶರತ್ ಕೆ ರಾವ್ ಕೆಎಚ್ ಲರ್ನ್ ನಿರಂತರ ಕಲಿಕಾ ಕಾರ್ಯಕ್ರಮದ ಕುರಿತು ಅವಲೋಕನ ಮಾಡಿದರು. ಕೆಎಂಸಿಯ ವೈದ್ಯಕೀಯ ಅಧೀಕ್ಷಕ ಡಾ.ಅವಿನಾಶ್ ಶೆಟ್ಟಿ ಸ್ವಾಗತಿಸಿದರೆ, ಡಾ.ಪದ್ಮರಾಜ್ ಹೆಗ್ಡೆ ವಂದಿಸಿ ದರು. ಡಾ.ನಿಕಿತಾ ಕಾರ್ಯಕ್ರಮ ನಿರೂಪಿಸಿದರು.








