ಜನವರಿ 16ರಿಂದ ಕೋವಿಡ್ ಲಸಿಕೆ ಅಭಿಯಾನ ಆರಂಭ

ಹೊಸದಿಲ್ಲಿ, ಜ. 9: ಭಾರತದ ಕೊರೋನ ವೈರಸ್ ಲಸಿಕೆ ಅಭಿಯಾನ ಜನವರಿ 16ರಿಂದ ಆರಂಭವಾಗಲಿದೆ ಎಂದು ಕೇಂದ್ರ ಸರಕಾರ ಶನಿವಾರ ತಿಳಿಸಿದೆ. ದೇಶದಲ್ಲಿ ಕೊರೋನ ಪರಿಸ್ಥಿತಿ ಪರಿಶೀಲಿಸಲು ಹಾಗೂ ಲಸಿಕೆ ಬಿಡುಗಡೆಯ ವಿವರಗಳನ್ನು ಅಂತಿಮಗೊಳಿಸಲು ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಹಿರಿಯ ಅಧಿಕಾರಿಗಳೊಂದಿಗೆ ನಡೆದ ಉನ್ನತ ಮಟ್ಟದ ಸಭೆ ಬಳಿಕ ಕೇಂದ್ರ ಸರಕಾರ ಈ ಘೋಷಣೆ ಮಾಡಿದೆ.
ಇದು ಕೋವಿಡ್-19ರ ವಿರುದ್ಧದ ಹೋರಾಟದಲ್ಲಿ ಮೈಲುಗಲ್ಲಿನ ಹೆಜ್ಜೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ. ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟದಲ್ಲಿ ನೇರವಾಗಿ ಭಾಗಿಯಾಗುವ 1 ಕೋಟಿ ಆರೋಗ್ಯ ಕಾರ್ಯಕರ್ತರು, ವೈದ್ಯರು, ಸಮುದಾಯ ಆರೋಗ್ಯ ಕಾರ್ಯಕರ್ತರು ಹಾಗೂ ಪೊಲೀಸರಂತಹ 2 ಕೋಟಿ ಮುಂಚೂಣಿ ಸಿಬ್ಬಂದಿಗಳಿಗೆ ಕೊರೋನ ಲಸಿಕೆ ನೀಡುವಲ್ಲಿ ಮೊದಲ ಆದ್ಯತೆ ನೀಡಲಾಗುವುದು.
ಈ ಸಮೂಹಕ್ಕೆ ಉಚಿತವಾಗಿ ಲಸಿಕೆ ನೀಡಲಾಗುವುದು ಎಂದು ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ಕಳೆದ ವಾರ ಹೇಳಿದ್ದರು. ಅನಂತರದ ಆದ್ಯತೆಯನ್ನು 50 ವರ್ಷ ಮೇಲ್ಪಟ್ಟ ಜನರಿಗೆ, ಬಳಿಕದ ಆದ್ಯತೆಯನ್ನು ಹಲವು ರೋಗಗಳಿಂದ ಬಳಲುತ್ತಿರುವ 50 ವರ್ಷದ ಕೆಳಗಿನ ಪ್ರಾಯದವರಿಗೆ ನೀಡಲಾಗುವುದು. ಮೊದಲ ಹಂತದಲ್ಲಿ ಒಟ್ಟು 30 ಕೋಟಿ ಜನರಿಗೆ ಲಸಿಕೆ ನೀಡುವ ಉದ್ದೇಶ ಹೊಂದಲಾಗಿದೆ ಎಂದು ಅವರು ತಿಳಿಸಿದ್ದರು. ಸರಕಾರ ಘೋಷಿಸಿದ ನಿಮಿಷಗಳ ಬಳಿಕ ಪ್ರಧಾನಿ ನರೇಂದ್ರ ಮೋದಿ, ‘‘ಜನವರಿ 16ರಂದು ಭಾರತ ಕೋವಿಡ್-19 ವಿರುದ್ಧದ ಹೋರಾಟದಲ್ಲಿ ಮೈಲುಗಲ್ಲಿನ ಹೆಜ್ಜೆ ಇರಿಸಲಿದೆ. ಅಂದಿನಿಂದ ರಾಷ್ಟ್ರ ವ್ಯಾಪಿ ಲಸಿಕೆ ಅಭಿಯಾನ ಆರಂಭವಾಗಲಿದೆ. ನಮ್ಮ ಧೈರ್ಯಶಾಲಿ ವೈದ್ಯರು, ಆರೋಗ್ಯ ಕಾರ್ಯಕರ್ತರು, ಸಫಾಯಿ ಕರ್ಮಾಚಾರಿಗಳು ಸೇರಿದಂತೆ ಮುಂಚೂಣಿ ಕಾರ್ಯಕರ್ತರಿಗೆ ಆದ್ಯತೆ ನೀಡಲಾಗುವುದು’’ ಎಂದು ಟ್ವೀಟ್ ಮಾಡಿದ್ದಾರೆ.







