ದೈವಸ್ಥಾನಗಳಲ್ಲಿ ಕಳವು: ದೂರು
ಮಂಗಳೂರು, ಜ.9: ಕುಳಾಯಿ ಹೊಸಬೆಟ್ಟು ವ್ಯಾಪ್ತಿಯಲ್ಲಿರುವ ಎರಡು ದೈವಸ್ಥಾನಗಳಿಗೆ ನುಗ್ಗಿದ ಕಳ್ಳರು ಲಕ್ಷಾಂತರ ರೂ. ಮೌಲ್ಯದ ಸೊತ್ತುಗಳನ್ನು ಕಳವು ಮಾಡಿದ ಬಗ್ಗೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನೆ 1: ಕುಳಾಯಿ ಹೊಸಬೆಟ್ಟು ಭರತ್ ಎಂಬವರ ಮನೆಯ ಆವರಣದಲ್ಲಿ ಕುಟುಂಬದ ಕಲ್ಲುರ್ಟಿ-ಪಂಜುರ್ಲಿ ದೈವಸ್ಥಾನವಿದೆ. ರಾತ್ರಿವೇಳೆ ದೈವಸ್ಥಾನ ಬಾಗಿಲಿನ ಚಿಲಕ ಮುರಿದು ಒಳ ಪ್ರವೇಶಿಸಿದ ಕಳ್ಳರು 150ಗ್ರಾಂ ತೂಕದ ಬೆಳ್ಳಿಯ ಕಿರೀಟ, ಸುಮಾರು 900ಗ್ರಾಂ ತೂಕದ ಬೆಳ್ಳಿಯ ಕಡ್ಸಲೆ, 200ಗ್ರಾಂ ತೂಕದ ಕಲ್ಲುರ್ಟಿ ದೈವದ ಬೆಳ್ಳಿಯ ಮೂರ್ತಿ, ಮೂರ್ತಿಯ ಮೇಲೆ ಹಾಕಿದ 7.5ಗ್ರಾಂ ತೂಕದ ಚಿನ್ನದ ಕರಿಮಣಿ ಸರ, ಕಾಣಿಕೆ ಡಬ್ಬಿಯಲ್ಲಿದ್ದ ಹಣ ಕಳವು ಮಾಡಿದ್ದಾರೆ. ಕಳವಾದ ಸೊತ್ತುಗಳ ಅಂದಾಜು ಮೌಲ್ಯ 1.40ಲಕ್ಷ ರೂ. ಎಂದು ತಿಳಿದುಬಂದಿದೆ.
ಘಟನೆ 2: ಕುಳಾಯಿ ಹೊಸಬೆಟ್ಟು ಹೊಯಿಗೆದಿಡ್ಡು ಕಲ್ಲುರ್ಟಿ-ಕಲ್ಕುಡ ಹಾಗೂ ವರ್ತೇಶ್ವರಿ ಜೋಡು ಪಂಜುರ್ಲಿ ದೈವಸ್ಥಾನಕ್ಕೆ ಜ.8ರಂದು ರಾತ್ರಿ ನುಗ್ಗಿದ ಕಳ್ಳರು ದೈವಸ್ಥಾನದ ಬಾಗಿಲು ಹಾನಿಗೊಳಿಸಿ ಒಳಪ್ರವೇಶಿಸಿ ದೈವದ ತಾಮ್ರದ ಕಾಣಿಕೆ ಡಬ್ಬಿ, ಬೆಳ್ಳಿಯ ಕಿರೀಟ ಹಾಗೂ ಬೆಳ್ಳಿಯ ಕಡ್ಸಲೆಯನ್ನು ಕಳವು ಮಾಡಿದ್ದಾರೆ. ಕಳವಾದ ಸೊತ್ತುಗಳ ಮೌಲ್ಯ 1.25 ಲಕ್ಷ ರೂ. ಎಂದು ತಿಳಿದು ಬಂದಿದೆ.





