ಶಿಶುನಾಳ ಶರೀಫರಂತೆ ಕೆ.ಎಂ.ಶರೀಫ್ ಶಾಂತಿ-ಸೌಹಾರ್ದತೆಗೆ ಶ್ರಮಿಸಿದವರು: ಜಿ.ಎಂ.ವೀರಸಂಗಯ್ಯ
ಬೆಂಗಳೂರು, ಜ.9: 19ನೆ ಶತಮಾನದ ಶಿಶುನಾಳ ಶರೀಫರು ಮತ್ತು 20ನೆ ಶತಮಾನದ ಕೆ.ಎಂ.ಶರೀಫರು ದೇಶದ ಸೌಹಾರ್ದತೆ, ಶಾಂತಿಗಾಗಿ ಶ್ರಮಿಸಿದವರು. ಅವರ ಆದರ್ಶಗಳನ್ನು ಸಮಾಜದಲ್ಲಿ ಇನ್ನಷ್ಟು ಪಸರಿಸುವ ಮೂಲಕ ಅವರಿಗೆ ಗೌರವ ಸಲ್ಲಿಸಬೇಕು ಎಂದು ರಾಜ್ಯ ರೈತ ಸಂಘದ ಕಾರ್ಯಾಧ್ಯಕ್ಷ ಜಿ.ಎಂ.ವೀರಸಂಗಯ್ಯ ಹೇಳಿದ್ದಾರೆ.
ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಕೃಷಿ ತಂತ್ರಜ್ಞರ ಸಂಸ್ಥೆಯ ಸಭಾಂಗಣದಲ್ಲಿಂದು ಏರ್ಪಡಿಸಿದ್ದ ‘ಕೆ.ಎಂ.ಶರೀಫ್-ಬದುಕು ಮತ್ತು ಹೋರಾಟ’ ಕುರಿತ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ, ಹಿರಿಯ ವಕೀಲ ಡಾ.ಸಿ.ಎಸ್.ದ್ವಾರಕಾನಾಥ್ ಮಾತನಾಡಿ, ಪ್ರತಿರೋಧ ಪ್ರಕೃತಿ ನಿಯಮವಾಗಿದ್ದು, ಸ್ವ ರಕ್ಷಣೆಗಾಗಿ ಪ್ರತಿಯೊಂದು ಜೀವಿಯೂ ಪ್ರತಿರೋಧ ತೋರುತ್ತದೆ. ಅನ್ಯಾಯ, ದೌರ್ಜನ್ಯಗಳ ವಿರುದ್ಧ ಪ್ರತಿರೋಧ ತೋರುವುದು ತಪ್ಪಲ್ಲ ಎಂದು ಹೇಳಿದರು.
ಸಂವಿಧಾನದ ಮೂಲ ಆಶಯವಾದ ಜಾತ್ಯತೀತತೆ ನಾಶವಾಗುತ್ತಿರುವ ಪ್ರಸ್ತುತ ಸಂದರ್ಭದಲ್ಲಿ ಕೆ.ಎಂ.ಶರೀಫ್ ಅವರು ಸಂಘಟನೆಯ ಸಿದ್ಧಾಂತವನ್ನು ದೇಶದ ಮೂಲೆ ಮೂಲೆಗೂ ತಲುಪಿಸಿದರು. ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿದ್ದ ದೌರ್ಜನ್ಯದ ವಿರುದ್ಧ ಸರಕಾರವಾಗಲಿ, ರಾಜಕಾರಣಿಗಳಾಗಲಿ, ಪೊಲೀಸ್ ಇಲಾಖೆಯಾಗಲಿ ರಕ್ಷಣೆ ಕೊಡದಿದ್ದಾಗ ಸ್ವಾಭಾವಿಕವಾಗಿ ಪ್ರತಿರೋಧ ಆರಂಭವಾಯಿತು ಎಂದು ಅವರು ಹೇಳಿದರು.
ಇದಕ್ಕಾಗಿ ಹೋರಾಟಗಾರ ಕೆ.ಎಂ.ಶರೀಫ್ ನೇತೃತ್ವದಲ್ಲಿ ಕೆಎಫ್‍ಡಿ ಎಂಬ ಸಂಘಟನೆ ಸ್ಥಾಪಿಸಲಾಯಿತು. ಪ್ರತಿರೋಧ ಹುಟ್ಟಿದ ತಕ್ಷಣ ಕೆಲವರಿಗೆ ಇದು ಕೋಮುವಾದಿಯಾಗಿ ಕಂಡಿತು. ಹಾಗಾದರೆ ಪ್ರತಿರೋಧ ತೋರುವುದು ತಪ್ಪೇ? ಎಂದು ದ್ವಾರಕಾನಾಥ್ ಪ್ರಶ್ನಿಸಿದರು.
ಪ್ರಗತಿಪರರು ಎನಿಸಿಕೊಂಡವರು ಕೂಡ ಪಿಎಫ್‍ಐ ವಿರುದ್ಧದ ಸುಳ್ಳು ಆಪಾದನೆಯನ್ನು ಕಣ್ಣು ಮುಚ್ಚಿ ನಂಬುತ್ತಿರುವುದು ವಿಷಾದನೀಯ. ಇನ್ನಾದರೂ ಪ್ರಗತಿಪರರು ಸತ್ಯವನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಬೇಕು. ಸಂವಿಧಾನದ ಬಗ್ಗೆ ಅಪಾರ ಜ್ಞಾನ ಹೊಂದಿದ್ದ ಕೆ.ಎಂ.ಶರೀಫ್ ಅವರ ಹೋರಾಟ, ಆಶಯಗಳನ್ನು ಮುಂದುವರಿಸಿಕೊಂಡು ಹೋಗುವುದೇ ನಾವು ಅವರಿಗೆ ಸಲ್ಲಿಸುವ ಗೌರವ ಎಂದು ಅವರು ಕರೆ ನೀಡಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ರಾಜ್ಯಾಧ್ಯಕ್ಷ ಯಾಸಿರ್ ಹಸನ್, ಮರ್ದಿತ ಸಮುದಾಯದ ಧ್ವನಿಯಾಗಿದ್ದ ಕೆ.ಎಂ.ಶರೀಫ್, ಮುಸ್ಲಿಂ ಸಮುದಾಯದಲ್ಲಿ, ದಮನಿತರಲ್ಲಿ ಆತ್ಮವಿಶ್ವಾಸವನ್ನು ಬಿತ್ತಿ ಗೌರವ, ಸ್ವಾಭಿಮಾನದಿಂದ ಬದುಕುವ ದಾರಿ ತೋರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು ಎಂದರು.
ಅದ್ಭುತ ಸಂಘಟನಾ ಶಕ್ತಿ ಹೊಂದಿದ್ದ ಅವರು, ಹಳ್ಳಿ ಹಳ್ಳಿಗಳಿಗೆ ತೆರಳಿ ತಮ್ಮ ಭಾಷಣದ ಮೂಲಕ ಹತಾಶರಾಗಿದ್ದ ಮುಸ್ಲಿಂ ಯುವಕರಲ್ಲಿ ಆತ್ಮವಿಶ್ವಾಸ ತುಂಬಿದರು. ಮೇರು ವ್ಯಕ್ತಿತ್ವದ ಹೋರಾಟಗಾರರಾಗಿದ್ದ ಕೆ.ಎಂ.ಶರೀಫ್ ಅವರ ತ್ಯಾಗದ ಫಲವಾಗಿ ಇಂದು ಸಾವಿರಾರು ಕಾರ್ಯಕರ್ತರು, ನಾಯಕರು ಸೃಷ್ಟಿಯಾಗಿದ್ದಾರೆ ಎಂದು ಯಾಸಿರ್ ಹಸನ್ ಹೇಳಿದರು.
ಕನ್ನಡ ಸಾಹಿತ್ಯದಲ್ಲಿ ಅಪಾರ ಅಭಿರುಚಿ ಹೊಂದಿದ್ದ ಕೆ.ಎಂ.ಶರೀಫ್, ಬಹುಮುಖ ಪ್ರತಿಭೆಯುಳ್ಳ ಸೌಮ್ಯ ಸ್ವಭಾವದ, ಅತ್ಯಂತ ಧೈರ್ಯಶಾಲಿ ನಾಯಕರಾಗಿದ್ದರು. ಫ್ಯಾಶಿಸ್ಟ್ ವಿರುದ್ಧದ ಹೋರಾಟದ ಮುಂಚೂಣಿ ನಾಯಕರಾಗಿದ್ದ ಅವರ ಅಗಲಿಕೆಯಿಂದಾಗಿ ಈ ಹೋರಾಟಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಯಾಸಿರ್ ಹಸನ್ ಹೇಳಿದರು.
‘ನಾವೇ ಕರ್ನಾಟಕ’ ಸಂಘಟನೆಯ ಮುಖ್ಯಸ್ಥ ಪಾರ್ವತೀಶ ಬಿಳಿದಾಳೆ ಮಾತನಾಡಿ, ದೂರದೃಷ್ಟಿಯ ನಾಯಕರಾಗಿದ್ದ ಕೆ.ಎಂ.ಶರೀಫ್ ಕೇವಲ ಮುಸ್ಲಿಮರು ಮಾತ್ರವಲ್ಲ ನಮ್ಮಂತಹವರಲ್ಲಿಯೂ ಭರವಸೆ ಮೂಡಿಸಿದ್ದರು. ದಾಸರ, ಶರಣರ, ಶಿಶುನಾಳ ಶರೀಫರ ಕೆಲವು ಗುಣಗಳು, ಟಿಪ್ಪು ಸುಲ್ತಾನ್‍ನ ಛಲ, ನಜೀರ್ ಸಾಬ್‍ರ ಅಂತಃಕರಣವನ್ನು ಕೆ.ಎಂ.ಶರೀಫ್ ಹೊಂದಿದ್ದರು ಎಂದು ಬಣ್ಣಿಸಿದರು.
ಪಿಎಫ್‍ಐ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನೀಸ್ ಅಹ್ಮದ್, ಪತ್ರಕರ್ತ ರಾ.ಚಿಂತನ್, ಪ್ರಸ್ತುತ ಪಾಕ್ಷಿಕದ ಪ್ರಧಾನ ಸಂಪಾದಕ ಅಬ್ದುಲ್ ರಝಾಕ್ ಕೆಮ್ಮಾರ ಸೇರಿದಂತೆ ಇನ್ನಿತರರು ಕೆ.ಎಂ.ಶರೀಫ್ ಅವರೊಂದಿಗಿನ ಒಡನಾಟವನ್ನು ಸ್ಮರಿಸಿದರು.







