ಹಕ್ಕಿ ಜ್ವರ: ದಿಲ್ಲಿಯ ಸಂಜಯ್ ಸರೋವರದಲ್ಲಿ 10 ಸತ್ತ ಬಾತುಕೋಳಿ ಪತ್ತೆ

ಹೊಸದಿಲ್ಲಿ, ಜ. 9: ಪೂರ್ವ ದಿಲ್ಲಿಯ ಸಂಜಯ್ ಸರೋವರದಲ್ಲಿ ಶನಿವಾರ 10 ಸತ್ತ ಬಾತುಕೋಳಿಗಳು ಪತ್ತೆಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇಲ್ಲಿನ ಮಯೂರ್ ವಿಹಾರ್ ಫೇಸ್ 3ರ ಸೆಂಟ್ರಲ್ ಪಾರ್ಕ್‌ನಲ್ಲಿ 17 ಸತ್ತ ಕಾಗೆಗಳು ಪತ್ತೆಯಾದ ಒಂದು ದಿನದ ಬಳಿಕ ಈ ಬಾತುಕೋಳಿಗಳು ಪತ್ತೆಯಾಗಿವೆ. ಮುಂದಿನ ನೋಟಿಸಿನ ವರೆಗೆ ಸರೋವರವನ್ನು ಮುಚ್ಚಲು ಆದೇಶಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
‘‘ನಾವು ಸಂಜಯ್ ಸರೋವರದಲ್ಲಿ 10 ಸತ್ತ ಬಾತುಕೋಳಿಗಳನ್ನು ಪತ್ತೆ ಮಾಡಿದ್ದೇವೆ. ಮಾದರಿಯನ್ನು ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಿ ಕೊಡಲಾಗಿದೆ’’ ಎಂದು ಪಶು ಸಂಗೋಪನೆ ಇಲಾಖೆಯ ಡಾ. ರಾಕೇಶ್ ಸಿಂಗ್ ಹೇಳಿದ್ದಾರೆ. ದಿಲ್ಲಿಯಲ್ಲಿ ಕಳೆದ ಕೆಲವು ದಿನಗಳಲ್ಲಿ 35 ಕಾಗೆಗಳು ಸೇರಿದಂತೆ ಕನಿಷ್ಠ 50 ಹಕ್ಕಿಗಳು ಸಾವನ್ನಪ್ಪಿವೆ. ಇದರಿಂದ ಹಕ್ಕಿ ಜ್ವರದ ಆತಂಕ ಉಂಟಾಗಿದೆ ಎಂದು ಅವರು ತಿಳಿಸಿದ್ದಾರೆ.
‘‘ಪಶ್ಚಿಮದಿಲ್ಲಿಯ ಮಯೂರ್ ವಿಹಾರ್ ಫೇಸ್ 3ರ ದ್ವಾರಕಾ ಹಾಗೂ ಹಸ್ತಸಾಲ್ ಗ್ರಾಮದಲ್ಲಿ ಕಾಗೆಗಳು ಸತ್ತ ಬಗ್ಗೆ ನಾವು ಮಾಹಿತಿ ಸ್ವೀಕರಿಸಿದ್ದೆವು. ಆದರೆ, ಕಾಗೆಗಳು ಹಕ್ಕಿ ಜ್ವರದಿಂದಲೇ ಸಾವನ್ನಪ್ಪಿವೇವೆ ಎಂಬುದು ಇದುವರೆಗೆ ದೃಢಪಟ್ಟಿಲ್ಲ’’ ಎಂದು ಸಿಂಗ್ ತಿಳಿಸಿದ್ದಾರೆ. ಸಂಗ್ರಹಿಸಲಾದ ಮಾದರಿಯನ್ನು ಭೋಪಾಲದಲ್ಲಿರುವ ಐಸಿಎಆರ್‌ನ ನ್ಯಾಶನಲ್ ಇನ್‌ಸ್ಟಿಟ್ಯೂಟ್ ಆಫ್ ಹೈ ಸೆಕ್ಯುರಿಟಿ ಅನಿಮಲ್ ಡಿಸೀಸ್‌ಗೆ ಶನಿವಾರ ಕಳುಹಿಸಿ ಕೊಡಲಾಗಿದೆ. ಇದರ ವರದಿ ಸೋಮವಾರ ಸಿಗಲಿದೆ ಎಂದು ಅವರು ತಿಳಿಸಿದ್ದಾರೆ.







