ಚೀನಾ ಸಮುದ್ರದಲ್ಲಿ ಸಿಲುಕಿರುವ ಭಾರತೀಯ ನಾವಿಕರು ಮುಂದಿನ ವಾರ ಹಿಂದಕ್ಕೆ: ಸಚಿವ ಮನ್‌ಸುಖ್ ಮಾಂಡವಿಯ

ಹೊಸದಿಲ್ಲಿ, ಜ. 9: ಕೊರೋನ ಸಾಂಕ್ರಾಮಿಕ ರೋಗದ ನಡುವೆ ಹಲವು ತಿಂಗಳು ಚೀನಾದಲ್ಲಿ ಸಿಲುಕಿಕೊಂಡಿದ್ದ 39 ನಾವಿಕರು ಮುಂದಿನ ವಾರ ಭಾರತಕ್ಕೆ ಹಿಂದಿರುಗಲಿದ್ದಾರೆ ಎಂದು ಕೇಂದ್ರ ಬಂದರು, ಶಿಪ್ಪಿಂಗ್ ಹಾಗೂ ಜಲಮಾರ್ಗ ಖಾತೆಯ ಸಹಾಯಕ ಸಚಿವ ಮನ್‌ಸುಖ್ ಮಾಂಡವಿಯ ಇಂದು ಟ್ವೀಟ್ ಮಾಡಿದ್ದಾರೆ.
ಚೀನಾ ಸಮುದ್ರದಲ್ಲಿ ಎರಡು ಹಡುಗುಗಳಲ್ಲಿ ಸಿಲುಕಿಕೊಂಡಿರುವ ಭಾರತೀಯ ನಾವಿಕರಿಗೆ ತುರ್ತು ನೆರವು ಒದಗಿಸುವಂತೆ ಭಾರತ ಕಳೆದ ಕೆಲವು ವಾರಗಳಿಂದ ಚೀನಾವನ್ನು ನಿರಂತರ ಆಗ್ರಹಿಸುತ್ತಾ ಬಂದಿದೆ. ಚೀನಾದಲ್ಲಿ ಸಿಲುಕಿಕೊಂಡಿರುವ ನಮ್ಮ ನಾವಿಕರು ಹಿಂದಿರುಗುತ್ತಿದ್ದಾರೆ. ಸಿಬ್ಬಂದಿ ಬದಲಾವಣೆ ಮಾಡಲು ಚಿಬಾ, ಜಪಾನ್ ಕಡೆಗೆ ತೆರಳಿ ಚೀನಾದಲ್ಲಿ ಸಿಲುಕಿಕೊಂಡಿದ್ದ 23 ಭಾರತೀಯ ನಾವಿಕರನ್ನು ಒಳಗೊಂಡ ಎಂ.ವಿ. ಜಗ್ ಆನಂದ್ ಹಡಗು ಜನವರಿ 14ರಂದು ಭಾರತಕ್ಕೆ ತಲುಪಲಿದೆ ಎಂದು ಅವರು ಟ್ವೀಟ್ ಮಾಡಿದ್ದಾರೆ. ಇದು ಸಾಧ್ಯವಾಗಿರುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಬಲಿಷ್ಠ ನಾಯಕತ್ವ ಕಾರಣ ಎಂದು ಹೇಳಿದ ಮಾಂಡವಿಯ, ನಾವಿಕರ ಬಗ್ಗೆ ಮಾನವೀಯತೆ ತೋರಿದ ಹಾಗೂ ನಿರ್ಣಾಯಕ ಸಮಯದಲ್ಲಿ ಅವರಿಗೆ ಬೆಂಬಲವಾಗಿ ನಿಂತ ಗ್ರೇಟ್ ಈಸ್ಟರ್ನ್ ಶಿಪ್ಪಿಂಗ್ ಕಂಪೆನಿಯನ್ನು ಪ್ರಶಂಸಿಸಿದ್ದಾರೆ.
ಭಾರತೀಯ ನಾವಿಕರನ್ನು ಶೀಘ್ರದಲ್ಲಿ ಹಿಂದೆ ಕರೆ ತರಲಾಗುವುದು. ಚೀನಾದೊಂದಿಗೆ ರಾಜತಾಂತ್ರಿಕ ಮಾತುಕತೆ ನಡೆಯುತ್ತಿದೆ ಎಂದು ಮಾಂಡವಿಯ ಡಿಸೆಂಬರ್ 30ರಂದು ಹೇಳಿದ್ದರು. ಕೊರೋನ ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ 39 ನಾವಿಕರು ಇದ್ದ ಎಂ.ವಿ. ಜಗ್ ಆನಂದ್ ಹಾಗೂ ಎಂ.ವಿ. ಅನಸ್ತಾಸಿಯಾ ಹಡಗಿಗೆ ಆಡಳಿತ ಹಡಗುಕಟ್ಟೆ ಪ್ರವೇಶಿಸಲು ಅಥವಾ ಸಿಬ್ಬಂದಿ ಬದಲಾವಣೆಗೆ ಚೀನಾ ಅವಕಾಶ ನೀಡಿರಲಿಲ್ಲ. ಭಾರತದ ಬೃಹತ್ ಸರಕು ಹಡಗು ಎಂ.ವಿ. ಜಗ್ ಆನಂದ್ ಚೀನಾದ ಹೆಬೈ ಪ್ರಾಂತ್ಯದ ಜಿಂಗ್‌ಟಾಂಗ್ ಬಂದರಿನ ಸಮೀಪ ಜೂನ್ 13ರಿಂದ ಲಂಗರು ಹಾಕಿದೆ. ಈ ಹಡಗಿನಲ್ಲಿ 23 ಭಾರತೀಯ ನಾವಿಕರು ಇದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ವಕ್ತಾರ ಈ ಹಿಂದೆ ಹೇಳಿದ್ದರು. 16 ಭಾರತೀಯ ನಾವಿಕರನ್ನು ಒಳಗೊಂಡ ಎಂ.ವಿ. ಅನಸ್ತಾಸಿಯಾ ಚೀನಾದ ಕಾವೋಫೈಡಿಯನ್ ಬಂದರಿನ ಸಮೀಪ ಸೆಪ್ಟಂಬರ್ 20ರಿಂದ ಲಂಗರು ಹಾಕಿತ್ತು.







