ಟ್ರಂಪ್ ಅವರ ಅಣ್ವಸ್ತ್ರ ಬಳಕೆಯ ಅಧಿಕಾರಕ್ಕೆ ತಡೆ?

ನ್ಯಾನ್ಸಿ ಪೆಲೋಸಿ
ವಾಶಿಂಗ್ಟನ್,ಜ.9: ತನ್ನ ಅಧ್ಯಕ್ಷೀಯ ಅಧಿಕಾರದ ಅಂತಿಮ ದಿನಗಳಲ್ಲಿ ಡೊನಾಲ್ಡ್ ಟ್ರಂಪ್, ಅಣ್ವಸ್ತ್ರ ದಾಳಿ ಸೇರಿದಂತೆ ಸೇನಾ ಕಾರ್ಯಾಚರಣೆಗಳಿಗೆ ಆದೇಶ ನೀಡುವ ಸಾಧ್ಯತೆಯಿರುವುದರಿಂದ, ಹಾಗೆ ಮಾಡದಂತೆ ತಡೆಯಲು ಅವರಿಗಿರುವ ಅಣ್ವಸ್ತ್ರ ಬಳಕೆ ಕುರಿತ ಅಧಿಕಾರಗಳನ್ನು ಮೊಟಕುಗೊಳಿಸುವ ಬಗ್ಗೆ ತಾನು ಸೇನಾ ಪಡೆಗಳ ವರಿಷ್ಠರ ಜೊತೆ ಮಾತುಕತೆ ನಡೆಸಿರುವುದಾಗಿ ಅಮೆರಿಕ ಪ್ರತಿನಿಧಿ ಸಭೆಯ ಸ್ಪೀಕರ್ ನ್ಯಾನ್ಸಿ ಪೆಲೋಸಿ ತಿಳಿಸಿದ್ದಾರೆ.
ಅಸ್ಥಿರವಾದ ಅಧ್ಯಕ್ಷರು ಸೇನಾ ಸಂಘರ್ಷಕ್ಕೆ ಉಪಕ್ರಮಿಸುವುದನ್ನು ಅಥವಾ ಅಣ್ವಸ್ತ್ರ ಉಡಾವಣೆಯ ಕೋಡ್ಗಳನ್ನು ಪಡೆಯುವುದನ್ನು ತಡೆಯುವುದಕ್ಕಾಗಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ತಾನು ಅಮೆರಿಕದ ಸೇನಾ ಪಡೆಗಳ ಮಹಾವರಿಷ್ಠ ಜ. ಮಾರ್ಕ್ ಮಿಲ್ಲೆ ಅವರೊಂದಿಗೆ ಸಮಾಲೋಚಿಸಿರುವುದಾಗಿ ಪೆಲೋಸಿ ತಿಳಿಸಿದ್ದಾರೆ.
ಅಣ್ವಸ್ತ್ರ ಪ್ರಯೋಗಿಸಲು ಆದೇಶ ನೀಡಲು ಅಮೆರಿಕ ಸರಕಾರದಲ್ಲಿ ಅಧಿಕಾರ ಹೊಂದಿರುವ ಏಕೈಕ ವ್ಯಕ್ತಿ ಅಧ್ಯಕ್ಷರಾಗಿದ್ದಾರೆ. ಆದರೆ ಅಣ್ವಸ್ತ್ರ ಪ್ರಯೋಗವು ಅಕ್ರಮವೆಂದು ಮನವರಿಕೆಯಾದಲ್ಲಿ ಆ ಆದೇಶವನ್ನು ತಿರಸ್ಕರಿಸುವ ಹಕ್ಕು ಸೇನಾ ಕಮಾಂಡರ್ ಅವರಿಗೆ ಇರುತ್ತದೆ.





