ಲಂಡನ್ನಲ್ಲಿ ಕೊರೋನ ವೈರಸ್ ನಿಯಂತ್ರಣ ತಪ್ಪಿ ಹರಡುತ್ತಿದೆ: ಮೇಯರ್ ಸಾದಿಕ್ ಖಾನ್ ಕಳವಳ

ಮೇಯರ್ ಸಾದಿಕ್ ಖಾನ್
ಲಂಡನ್,ಜ.9: ಬ್ರಿಟನ್ ರಾಜಧಾನಿ ಲಂಡನ್ನಲ್ಲಿ ರೂಪಾಂತರಿ ಕೊರೋನ ವೈರಸ್ ನಿಯಂತ್ರಣ ಮೀರಿ ಹರಡುತ್ತಿದ್ದು, ಇದೊಂದು ಗಂಭೀರ ಘಟನೆಯೆಂದು ನಗರದ ಮೇಯರ್ ಸಾದಿಕ್ ಖಾನ್ ಶುಕ್ರವಾರ ಘೋಷಿಸಿದ್ದಾರೆ.
ಈಗಾಗಲೇ ಕೊರೋನ ಸೋಂಕಿತರ ಚಿಕಿತ್ಸೆಗಾಗಿ ಹರಸಾಹಸ ಪಡುತ್ತಿರುವ ರಾಷ್ಟ್ರೀಯ ಆರೋಗ್ಯ ಸೇವಾ ಇಲಾಖೆಗೆ ಸೋಂಕು ಪ್ರಕರಣಗಳ ಸಂಖ್ಯೆಯಲ್ಲಿ ಭಾರೀ ಹೆಚ್ಚಳವಾಗುತ್ತಿರುವುದು ಭಾರೀ ಒತ್ತಡವನ್ನುಂಟು ಮಾಡಿದೆಯೆಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.ಕೊರೋನ ಚಿಕಿತ್ಸೆಗಾಗಿ ಆಸ್ಪತ್ರೆಗಳಲ್ಲಿ ಯಾಂತ್ರಿಕೃತ ವೆಂಟಿಲೇಟರ್ ವ್ಯವಸ್ಥೆಗೆ ಒಳಗಾದ ರೋಗಿಗಳ ಸಂಖ್ಯೆಯಲ್ಲಿ ಶೇ.42ರಷ್ಟು ಏರಿಕೆಯಾಗಿದೆ ಎಂದು ಸಾದಿಕ್ ಖಾನ್ ತಿಳಿಸಿದ್ದಾರೆ.
‘‘ಕೊರೋನ ವೈರಸ್ ಹಾವಳಿಯನ್ನು ಗಂಭೀರ ಘಟನೆಯೆಂದು ನಾನು ಘೋಷಿಸುತ್ತೇನೆ. ಯಾಕೆಂದರೆ ಈ ವೈರಸ್ ಒಡ್ಡಿರುವ ಬೆದರಿಕೆಯು ನಮ್ಮ ನಗರವನ್ನು ಬಿಕ್ಕಟ್ಟಿನ ಕೇಂದ್ರಬಿಂದುವಿಗೆ ತಳ್ಳಿದೆ ಎಂದು ಸಾದಿಕ್ ಅವರು ಬ್ರಿಟಿಷ್ ಪ್ರಧಾನಿ ಬೋರಿಸ್ ಜಾನ್ಸನ್ ಅವರಿಗೆ ಕೋವಿಡ್-19 ಕಟ್ಟೆಚ್ಚರದ ಕುರಿತಾಗಿ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.
‘‘ಲಂಡನ್ ನಗರದಲ್ಲಿನ ಸ್ಥಿತಿ ಅತ್ಯಂತ ಚಿಂತಾಜನಕವಾಗಿದ್ದು, ವೈರಸ್ನ ಹರಡುವಿಕೆಯು ಹತೋಟಿ ತಪ್ಪಿದೆ’’ ಎಂದು ಖಾನ್ ಹೇಳಿದ್ದಾರೆ.
‘‘ ಒಂದು ವೇಳೆ ತಕ್ಷಣವೇ ಯಾವುದೇ ಕ್ರಮವನ್ನು ಕೈಗೊಳ್ಳದೆ ನಮ್ಮ ರಾಷ್ಟ್ರೀಯ ಆರೋಗ್ಯ ಸೇವೆಯು ಮುಳುಗಿಹೋಗಲಿದೆ ಹಾಗೂ ಇನ್ನೂ ಹೆಚ್ಚಿನ ಸಂಖ್ಯೆಯ ವ್ಯಕ್ತಿಗಳು ಸಾವನ್ನಪ್ಪಲಿದ್ದಾರೆ ಎಂದವರು ತಿಳಿಸಿದ್ದಾರೆ.
‘‘ಲಂಡನ್ನಿಗರು ದೊಡ್ಡ ತ್ಯಾಗಗಳನ್ನು ಮಾಡುವುದನ್ನು ಮುಂದುವರಿಸಿದ್ದಾರೆ ಹಾಗೂ ಅತ್ಯಂತ ಅವಶ್ಯಕತೆಗಳು ಇಲ್ಲದೆ ಇದ್ದಲ್ಲಿ ದಯವಿಟ್ಟು ಮನೆಯಲ್ಲೇ ಉಳಿದುಕೊಳ್ಳಿ ಎಂಬುದಾಗಿ ನಾನು ಅವರಿಗೆ ಮನವಿ ಮಾಡುತ್ತಿದ್ದೇನೆ’’ ಎಂದವರು ಹೇಳಿದ್ದಾರೆ.







