ಶೀಘ್ರದಲ್ಲೇ ಪ್ರತ್ಯೇಕ ವೇದಿಕೆಯನ್ನು ಸ್ಥಾಪಿಸುವೆ: ಟ್ವಿಟರ್‌ಗೆ ಟ್ರಂಪ್ ಸವಾಲು
ನನ್ನನ್ನು ಮೌನವಾಗಿರಿಸಲು ಸಾಧ್ಯವಿಲ್ಲ

ವಾಶಿಂಗ್ಟನ್,ಜ.9: ತನ್ನ ಟ್ವಿಟರ್ ಖಾತೆಯನ್ನು ಶಾಶ್ವತವಾಗಿ ರದ್ದುಪಡಿಸಿರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಡೊನಾಲ್ಡ್ ಟ್ರಂಪ್, ತನ್ನನ್ನು ಹಾಗೂ ತನ್ನ ಬೆಂಬಲಿಗರನ್ನು ಮೌನವಾಗಿರಿಸಲು ಸಾಧ್ಯವಿಲ್ಲವೆಂದು ಎಚ್ಚರಿಕೆ ನೀಡಿದ್ದಾರೆ.
ತನ್ನ ಟ್ವಿಟರ್ ಖಾತೆಗಳನ್ನು ನಿಷೇಧಿಸಲ್ಪಟ್ಟ ಕೆಲವೇ ತಾಸುಗಳ ಬಳಿಕ ಟ್ರಂಪ್ ಹೇಳಿಕೆಯೊಂದನ್ನು ನೀಡಿ, ‘‘ ಹೀಗೆ ಸಂಭವಿಸಲಿದೆಯೆಂದು ನಾನು ಮೊದಲೇ ಭವಿಷ್ಯ ನುಡಿದಿದ್ದೆ. ನಾವು ಇತರ ಜಾಲತಾಣಗಳ ಜೊತೆ ಮಾತುಕತೆಗಳನ್ನು ನಡೆಸುತ್ತಿದ್ದು ಶೀಘ್ರದಲ್ಲೇ ದೊಡ್ಡ ಪ್ರಕಟನೆಯೊಂದನ್ನು ಹೊರಡಿಸಲಿದ್ದೇವೆ. ನಿಕಟ ಭವಿಷ್ಯದಲ್ಲಿ ನಮ್ಮದೇ ಆದ ವೇದಿಕೆಯೊಂದನ್ನು ನಿರ್ಮಿಸುವ ಸಾಧ್ಯತೆಗಳ ಬಗ್ಗೆಯೂ ಪರಿಶೀಲಿಸುತ್ತಿದ್ದೇವೆ ಎಂದವರು ಹೇಳಿದ್ದಾರೆ.
ನಮ್ಮನ್ನು ಮೌನವಾಗಿರಿಸಲು ಸಾಧ್ಯವಿಲ್ಲ ಎಂದು ಹೇಳಿಕೆ ನೀಡಿದ ಅವರು, ಟ್ವಿಟ್ಟರ್ ವಾಕ್‌ಸ್ವಾತಂತ್ರ್ಯಕ್ಕಾಗಿ ಇಲ್ಲವೆಂದು ಕಟಕಿಯಾಡಿದ್ದಾರೆ. ಟ್ವಿಟ್ಟರ್ ತೀವ್ರವಾದಿ ಎಡಪಂಥೀಯ ವೇದಿಕೆಯನ್ನು ಪ್ರೋತ್ಸಾಹಿಸುತ್ತಿದ್ದು, ಅದರಲ್ಲಿ ಜಗತ್ತಿನ ಅತ್ಯಂತ ದುಷ್ಟ ವ್ಯಕ್ತಿಗಳು ಮುಕ್ತವಾಗಿ ಮಾತನಾಡಲು ಅವಕಾಶ ನೀಡಲಾಗುತ್ತಿದೆ ಎಂದವರು ಹೇಳಿದ್ದಾರೆ.





