ರಾಜೀನಾಮೆ ನೀಡದೆ ಇದ್ದಲ್ಲಿ ಟ್ರಂಪ್ ವಿರುದ್ಧ ವಾಗ್ದಂಡನೆ ನಿರ್ಣಯ
ಪ್ರತಿನಿಧಿ ಸಭೆ ಸ್ಪೀಕರ್ ಪೆಲೋಸಿ ನಿರ್ಧಾರ

ವಾಶಿಂಗ್ಟನ್,ಜ.9: ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ತಕ್ಷಣವೇ ರಾಜೀನಾಮೆ ನೀಡದೆ ಇದ್ದಲ್ಲಿ, ಸಂಸತ್ ಭವನ ಕ್ಯಾಪಿಟೋಲ್ ಮೇಲೆ ದಾಳಿ ನಡೆಸಲು ತನ್ನ ಬೆಂಬಲಿಗರನ್ನು ಪ್ರಚೋದಿಸಿದ್ದಕ್ಕಾಗಿ ಅವರ ವಿರುದ್ಧ ವಾಗ್ದಂಡನೆ ಪ್ರಕ್ರಿಯೆಯನ್ನು ನಡೆಸಲು ಸದನವು ಕಾರ್ಯೋನ್ಮುಖವಾಗಲಿದೆಯೆಂದು ಅಮೆರಿಕ ಪ್ರತಿನಿಧಿ ಸಭೆ (ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್)ಯ ಸ್ಪೀಕರ್ ನ್ಯಾನ್ಸಿ ಪೆಲೋಸಿ ಶುಕ್ರವಾರ ತಿಳಿಸಿದ್ದಾರೆ.
ನವೆಂಬರ್ 3ರ ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ರಂಪ್ ಅವರು ಸೋಲನುಭವಿಸಿರುವದರಿಂದ ಅವರ ಉತರಾಧಿಕಾರಿಯಾಗಿ ಡೆಮಾಕ್ರಾಟಿಕ್ ಪಕ್ಷದ ಜೋ ಬೈಡೆನ್ ಜನವರಿ 20ರಂದು ಅಧಿಕಾರ ಸ್ವೀಕರಿಸಲಿದ್ದಾರೆ.
ಆದಾಗ್ಯೂ, ಬುಧವಾರ ಸಂಸತ್ ಭವನದ ಮೇಲೆ ದಾಳಿ ಘಟನೆಯ ಬಳಿಕ ಡೊನಾಲ್ಡ್ ಟ್ರಂಪ್ ಅವರನ್ನು ಅಧ್ಯಕ್ಷ ಹುದ್ದೆಯಿಂದ ವಜಾಗೊಳಿಸಬೇಕೆಂದು ಡೆಮಾಕ್ರಾಟರು ಹಾಗೂ ಸ್ಪೀಕರ್ ಪೆಲೋಸಿ ಬಲವಾಗಿ ಪ್ರತಿಪಾದಿಸಿದ್ದಾರೆ.
ಈ ಬಗ್ಗೆ ನ್ಯಾನ್ಸಿ ಪೆಲೋಸಿ ಅವರು ಶುಕ್ರವಾರ ಹೇಳಿಕೆಯೊಂದನ್ನು ನೀಡಿದ್ದು, ‘‘ ಅಧ್ಯಕ್ಷರು ತಕ್ಷಣವೇ ರಾಜೀನಾಮೆ ನೀಡುವರೆಂಬ ಆಶಾವಾದವನ್ನು ನಾನು ಹೊಂದಿದ್ದೇನೆ. ಆದರೆ ಒಂದು ವೇಳೆ ಅವರು ಹಾಗೆ ಮಾಡದೆ ಇದ್ದಲ್ಲಿ ಕಾಂಗ್ರೆಸ್ ಸಂಸದ ಜಾಮಿ ರಸ್ಕಿನ್ ಅವರ 25ನೇ ತಿದ್ದುಪಡಿ ಮಸೂದೆಯನ್ನು ಕಾರ್ಯಗತಗೊಳಿಸಲು ಹಾಗೂ ಮಹಾಭಿಯೋಗ ಗೊತ್ತುವಳಿಯನ್ನು ಮಂಡಿಸಲು ಸಿದ್ಧತೆ ನಡೆಸುವಂತೆ ನಾನು ಸದನ ನಿಯಮಾವಳಿಗಳ ಸಮಿತಿಗೆ ಸೂಚನೆ ನೀಡಿದ್ದೇನೆ ಎಂದು ಹೇಳಿದ್ದಾರೆ.
ಮಹಾಭಿಯೋಗ ಕಲಾಪಗಳನ್ನು ತಕ್ಷಣವೇ ಆರಂಭಿಸಬೇಕೆಂದು ಭಾರತೀಯ ಮೂಲದ ಅಮೆರಿಕನ್ ಕಾಂಗ್ರೆಸ್ ಸಂಸದೆ ಪ್ರಮೀಳಾ ಜಯಪಾಲ್ ತಿಳಿಸಿದ್ದಾರೆ.
ಟ್ರಂಪ್ ಶ್ವೇತಭವನದಲ್ಲಿ ಉಳಿದುಕೊಳ್ಳುವ ಒಂದೊಂದು ದಿನವೂ ಅಮೆರಿಕಕ್ಕೆ ಅಸುರಕ್ಷಿತವಾಗಿದೆ ಎಂದು ಮಹಾಭಿಯೋಗ ನಿರ್ಣಯದ ಸಹ ಪ್ರಾಯೋಜಕರಲ್ಲೊಬ್ಬರಾದ ಕಾಂಗ್ರೆಸ್ ಕಯಾಲಿ ಕೇಹೆಲ್ ಹೇಳಿದ್ದಾರೆ. ಅಮೆರಿಕ ಪ್ರತಿನಿಧಿ ಸಭೆಯ ಸದಸ್ಯರಾದ ಡೇವಿಡ್ ಸಿಸಿಲಿನ್, ಟೆಡ್ ಲಿಯ ಹಾಗೂ ಜಾಮಿ ರಸ್ಕಿನ್ ಹಾಗೂ ಕಾಂಗ್ರೆಸ್ ಸಂಸದೆ ಇಲ್ಹಾನ್ ಓಮರ್ , ನಿರ್ಣಯದ ಸಹ ಪ್ರವರ್ತಕರಾಗಿದ್ದಾರೆ.







