ಅಂತರ್ ರಾಷ್ಟ್ರೀಯ ವಿಮಾನಗಳ ಹಾರಾಟಕ್ಕೆ ಚೀನಾ ನಿಷೇಧ
ಅತಂತ್ರದಲ್ಲಿ ಭಾರತೀಯ ವಿದ್ಯಾರ್ಥಿಗಳು

ಬೀಜಿಂಗ್,ಜ.9: ಚೀನಾಕ್ಕೆ ವಿಶೇಷ ವಿಮಾನಗಳ ಹಾರಾಟವನ್ನು ನಡೆಸುವುದಕ್ಕೆ ಚೀನಾವು ಅನುಮತಿಯನ್ನು ನಿರಾಕರಿಸಿದೆ. ಕೋವಿಡ್-19 ನಿಯಂತ್ರಣಕ್ಕಾಗಿ ತಾನು ಕಟ್ಟುನಿಟ್ಟಿನ ನಿಯಮಾವಳಿಗಳನ್ನು ಜಾರಿಗೊಳಿಸಿರುವುದರಿಂದ ವಿದೇಶಿ ವಿಮಾನಗಳ ಹಾರಾಟಕ್ಕೆ ಅವಕಾಶ ನೀಡುವುದಿಲ್ಲವೆಂದು ಅದು ಹೇಳಿದೆ.
ಈ ಹಿನ್ನೆಲೆಯಲ್ಲಿ ಚೀನಾದ ವಿಶ್ವವಿದ್ಯಾನಿಲಯಗಳಲ್ಲಿ ಕಲಿಯುತ್ತಿರುವ ಭಾರತೀಯ ವಿದ್ಯಾರ್ಥಿಗಳು ತಮ್ಮ ಶಿಕ್ಷಣವನ್ನು ಆನ್‌ಲೈನ್ ತರಗತಿಗಳ ಮೂಲಕ ಮುಂದುವರಿಸಬೇಕೆಂದು ಭಾರತ ಸಲಹೆ ನೀಡಿದೆ.
‘‘ ಚೀನಾದಲ್ಲಿ ಶಿಕ್ಷಣವನ್ನು ಕೈಗೊಂಡಿರುವ ವಿದ್ಯಾರ್ಥಿಗಳಿಗೆ ಅಲ್ಲಿಗೆ ತೆರಳಲು ಸಾಧ್ಯವಾಗದೆ ಸಮಸ್ಯೆಯುಂಟಾಗಿರುವ ಬಗ್ಗೆ ಭಾರತೀಯ ರಾಯಭಾರಿ ಕಚೇರಿಯು ಚೀನಿ ಅಧಿಕಾರಿಗಳ ಜೊತೆ ಚರ್ಚಿಸಿದೆ. ಆದರೆ ದುರದೃಷ್ಟವಶಾತ್, ಈ ಪರಿಸ್ಥಿತಿಯಲ್ಲಿ ಯಾವುದೇ ಸುಧಾರಣೆಯುಂಟಾಗಿಲ್ಲ’’ ಎಂದು, ರಾಯಭಾರಿ ಕಚೇರಿಯು ಪತ್ರಿಕಾ ಹೇಳಿಕೆಯೊಂದರಲ್ಲಿ ತಿಳಿಸಿದೆ.
ಚೀನಾದ ವಿಶ್ವವಿದ್ಯಾನಿಲಯಗಳಲ್ಲಿ 23 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಅಧ್ಯಯನ ನಡೆಸುತ್ತಿದ್ದಾರೆ. ಅವರಲ್ಲಿ ಹೆಚ್ಚಿನವರು ವೈದ್ಯಕೀಯ ಶಿಕ್ಷಣವನ್ನು ಪಡೆಯುವವರಾಗಿದ್ದಾರೆ. ಚೀನಾದಲ್ಲಿ ಕೋವಿಡ್-19 ಹಾವಳಿ ಆರಂಭವಾದ ಬಳಿಕ ಭಾರೀ ಸಂಖ್ಯೆಯ ವಿದ್ಯಾರ್ಥಿಗಳು ಭಾರತಕ್ಕೆ ಹಿಂತಿರುಗಿದ್ದರೂ ಇದೀಗ ಅಲ್ಲಿ ವಿದ್ಯಾಲಯಗಳು ಪುನಾರಂಭಗೊಂಡಿರುವುದರಿಂದ ಅಲ್ಲಿಗೆ ತೆರಳಲಾಗದೆ ಅವರು ತೊಂದರೆಗೀಡಾಗಿದ್ದಾರೆ.





