ನೀರವ್ ಮೋದಿ ಗಡಿಪಾರು ವಿಚಾರಣೆ: ಜ.25 ರಂದು ಬ್ರಿಟನ್ ಕೋರ್ಟ್ ತೀರ್ಪು

ಲಂಡನ್,ಜ.9 ಪಂಜಾಬ್ ನ್ಯಾಶನಲ್ ಬ್ಯಾಂಕ್ ಹಗರಣದ ಆರೋಪಿಯಾಗಿದ್ದು ಬ್ರಿಟನ್‌ನಲ್ಲಿ ತಲೆಮರೆಸಿಕೊಂಡಿರುವ ವಜ್ರದ ವ್ಯಾಪಾರಿ ನೀರವ್ ಮೋದಿಯನ್ನ ಭಾರತಕ್ಕೆ ಗಡಿಪಾರು ಮಾಡಬೇಕೇ ಎಂಬ ಬಗ್ಗೆ ಬ್ರಿಟನ್‌ನ ನ್ಯಾಯಾಲಯವು ಜನವರಿ 25ರಂದು ತೀರ್ಪು ನೀಡಲಿದೆ.
ಜಿಲ್ಲಾ ನ್ಯಾಯಾಧೀಶ ಸ್ಯಾಮುವೆಲ್ ಮಾರ್ಕ್ ಗೂಝ್ ಅವರು ಶುಕ್ರವಾರದಂದು ಪ್ರಕರಣದ ಸಂಕ್ಷಿಪ್ತ ಆಲಿಕೆಯನ್ನು ನಡೆಸಿದ ಬಳಿಕ ನೀರವ್ ಅವರನ್ನು ಫೆಬ್ರವರಿ 5ರವರೆಗೆ ನ್ಯಾಯಾಂಗದ ಕಸ್ಟಡಿಗೆ ಒಪ್ಪಿಸಿದರು.
ವಾದ ಮಂಡನೆಯ ಅಂತಿಮ ದಿನವಾದ ಶುಕ್ರವಾರ ಭಾರತ ಸರಕಾರದ ಪರವಾಗಿ ವಾದಿಸಿದ ನ್ಯಾಯವಾದಿ ಹೆಲೆನ್ ಮಾಲ್ಕೊಮ್ ಕ್ಯೂಸಿ, 49 ವರ್ಷದ ನೀರವ್ ಪಂಜಾಬ್ ನ್ಯಾಶನಲ್ ಬ್ಯಾಂಕ್‌ನಲ್ಲಿ ಇತರ ಸಿಬ್ಬಂದಿಗ ತ ನೆರವಿನಿಂದ ಅಪಾರ ಮೊತ್ತದ ವಂಚನೆಯೆಸಗಿದ್ದು, ಆತನನ್ನು ಭಾರತಕ್ಕೆ ಗಡಿಪಾರು ಮಾಡಬೇಕೆಂದು ಮನವಿ ಮಾಡಿದರು.
ನೀರವ್ ಅವರು ತಾನು ಹಾಗೂ ತನ್ನ ಕುಟುಂಬದ ಸದಸ್ಯರೊಂದಿಗೆ ಬೋಗಸ್ ಕಂಪೆನಿಗಳನ್ನು ಸ್ಥಾಪಿಸಿ, ಭಾರೀ ಮೊತ್ತದ ಹಣವನ್ನು ವಂಚಿಸಿದ್ದಾರೆ ಮತ್ತು ಭಾರತದ ತನಿಖಾ ಸಂಸ್ಥೆ ಸಿಬಿಐನ ವಿಚಾರಣೆಯಲ್ಲಿಯೂ ಹಸ್ತಕ್ಷೇಪ ನಡೆಸಿದ್ದಾರೆಂದು ಅವರು ಆರೋಪಿಸಿದರು.





