ಗೋಹತ್ಯೆ ನಿಷೇಧ ಕಾಯ್ದೆ ಕಾರ್ಯಗತವಾದರೆ ರಾಜ್ಯದಲ್ಲಿ ಹಸುಗಳ ಸಂತತಿಯೇ ನಾಶ: ಆಹಾರ ತಜ್ಞ ಕೆ.ಸಿ.ರಘು

ಬೆಂಗಳೂರು, ಜ.10: ರಾಜ್ಯದಲ್ಲಿ ಗೋಹತ್ಯೆ ನಿಷೇಧ ತಿದ್ದುಪಡಿ ಕಾಯ್ದೆ ಕಾರ್ಯಗತವಾದರೆ ಹಸುಗಳ ಜನನ ನಾಶವಾಗಲಿದೆ. ಅದನ್ನು ವಿರೋಧಿಸದ್ದಿದ್ದರೆ ಕೃಷಿ ಹಾಗೂ ಹೈನುಗಾರಿಕೆಗೆ ದೊಡ್ಡ ಪೆಟ್ಟಾಗಲಿದೆ ಎಂದು ಆಹಾರ ತಜ್ಞ ಕೆ.ಸಿ.ರಘು ಆತಂಕ ವ್ಯಕ್ತಪಡಿಸಿದ್ದಾರೆ.
ರವಿವಾರ ನಗರದ ಕೊಂಡಜಿ ಬಸಪ್ಪ ಸಭಾಂಗಣದಲ್ಲಿ ಆಯೋಜಿಸಿದ್ದ ಗೋಹತ್ಯೆ ನಿಷೇಧ ತಿದ್ದುಪಡಿ ಕಾಯ್ದೆ ರೈತರ ಪಾಲಿಗೆ ಮರಣ ಶಾಸನ ಆಗಲಿದೆಯೇ ಎಂಬುದರ ಕುರಿತು ಆಯೋಜಿಸಿದ್ದ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ಈಗಾಗಲೇ ಗೋಹತ್ಯೆ ನಿಷೇಧ ತಿದ್ದುಪಡಿ ಕಾಯ್ದೆ ಜಾರಿಯಾಗಿರುವ ಉತ್ತರ ಪ್ರದೇಶ, ಮಧ್ಯಪ್ರದೇಶದಲ್ಲಿ ಹಸುಗಳ ಸಂಖ್ಯೆ ಸಾಕಷ್ಟು ಪ್ರಮಾಣದಲ್ಲಿ ಕಡಿಮೆಯಾಗಿರುವುದನ್ನು ಗಮನಿಸಬೇಕೆಂದು ತಿಳಿಸಿದ್ದಾರೆ.
ಹಸುಗಳು ರೈತರ ಆಸ್ತಿ. ಅದನ್ನು ಮಾರುವುದು, ಬಿಡುವುದು ಅವರಿಗೆ ಸೇರಿದ್ದು. ರೈತರ ಮಾತನ್ನೇ ಕೇಳದೆ, ಅವರ ವಿರುದ್ಧವಾಗಿಯೇ ಕಾನೂನು ಜಾರಿ ಮಾಡಲು ಹೊರಟಿದ್ದಾರೆ. ಬಿಜೆಪಿ ತನ್ನ ಸಿದ್ಧಾಂತದ ಜಾರಿಗಾಗಿ ಇಡೀ ರೈತರ, ಕೃಷಿ, ಹೈನುಗಾರಿಕೆಯಲ್ಲಿ ಸರ್ವನಾಶ ಮಾಡಲು ಮುಂದಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಒಂದು ವರ್ಷಕ್ಕೆ ಹೈನುಗಾರಿಕೆಯಿಂದ 5 ಲಕ್ಷ ಕೋಟಿ ರೂ.ಹೆಚ್ದು ವ್ಯವಹಾರ ನಡೆಯುತ್ತಿದೆ. ದೇಶದಲ್ಲಿ ಬ್ರಾಹ್ಮಣರಿಂದ ಹೈನುಗಾರಿಕೆ ಅಭಿವೃದ್ಧಿಯಾಗಿಲ್ಲ. ಬದಲಿಗೆ, ಕ್ಷೀರಕ್ರಾಂತಿಯ ಪಿತಾಮಹರೆಂದೇ ಖ್ಯಾತಿ ಗಳಿಸಿರುವ ಕ್ರಿಶ್ಚಿಯನ್ ಸಮುದಾಯದ ಕುರಿಯನ್ ಆಗಿದ್ದಾರೆ. ಈ ಕ್ಷೀರಕ್ರಾಂತಿಯನ್ನೇ ನಾಶ ಮಾಡಲು ಬಿಜೆಪಿ ಸರಕಾರ ಮುಂದಾಗಿದೆ ಎಂದು ಆಪಾದಿಸಿದ್ದಾರೆ.
ದೇಶದಲ್ಲಿ 40ಕೋಟಿ ರೂ.ಗೂ ಹೆಚ್ಚು ಮಂದಿ ದನದ ಮಾಂಸ ಸೇವಿಸುತ್ತಾರೆ. ಇದರಲ್ಲಿ ಬ್ರಾಹ್ಮಣರು, ದಲಿತರು, ಕ್ರಿಶ್ಚಿಯನ್, ಮುಸ್ಲಿಮರ ಒಳಗೊಂಡಿದ್ದಾರೆ. ಬ್ರಾಹ್ಮಣರ ಧರ್ಮ ಗ್ರಂಥಗಳಲ್ಲೂ ಅತಿಥಿಗಳಿಗೆ ದನದ ಮಾಂಸವನ್ನು ಉಣ ಬಡಿಸಿರುವ ಉಲ್ಲೇಖವಿದೆ. ಆಗಿದ್ದಾಗಿಯೂ ದೇಶದ ರೈತರ, ಮುಸ್ಲಿಮರು ಆರ್ಥಿಕ ಬೆನ್ನೆಲುಬನ್ನು ಮುರಿಯುವಂತಹ ಕೆಲಸಕ್ಕೆ ಮುಂದಾಗಿರುವುದು ಸರಿಯಲ್ಲವೆಂದು ಅವರು ತಿಳಿಸಿದ್ದಾರೆ.







