ಉಡುಪಿ: ಎಸೆಸೆಲ್ಸಿ ವಿದ್ಯಾರ್ಥಿಗಳಿಗೆ ಫೋನ್ ಇನ್ ಕಾರ್ಯಕ್ರಮ

ಉಡುಪಿ, ಜ.10: ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಶೈಕ್ಷಣಿಕ ಬಲವರ್ಧನೆಗಾಗಿ ಉಡುಪಿ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ವತಿಯಿಂದ ಗಣಿತ ವಿಷಯಕ್ಕೆ ಸಂಬಂಧಿಸಿ ಫೋನ್ ಇನ್ ಕಾರ್ಯಕ್ರಮವು ಶುಕ್ರವಾರ ಜರಗಿತು.
ಸಂಜೆ 5 ಗಂಟೆಯಿಂದ ಸಂಜೆ 7 ಗಂಟೆವರೆಗೆ ನಡೆದ ಫೋನ್ ಇನ್ ಕಾರ್ಯಕ್ರಮಕ್ಕೆ ಉಡುಪಿ ಜಿಲ್ಲೆ ಹಾಗೂ ತೀರ್ಥಹಳ್ಳಿ ತಾಲೂಕಿನಿಂದಲೂ ವಿದ್ಯಾರ್ಥಿಗಳು ಹಾಗೂ ಪೋಷಕರು ಕರೆ ಮಾಡಿದ್ದರು. ಹೀಗೆ 65ಕ್ಕೂ ಅಧಿಕ ಪ್ರಶ್ನೆಗಳನ್ನು ಕೇಳಿ ಗಣಿತ ವಿಷಯಕ್ಕೆ ಸಂಬಂದಿಸಿದ ಕಲಿಕಾ ಸುಸ್ಯೆಗಳನ್ನು ಪರಿಹರಿಸಿಕೊಂಡರು.
ಗಣಿತ ವಿಷಯದಲ್ಲಿ ಯಾವ ಯಾವ ಅಭ್ಯಾಸಗಳನ್ನು ಕಡಿತ ಮಾಡಲಾಗಿದೆ, ವರ್ಗ ಸಮೀಕರಣದಲ್ಲಿ ಮಾದರಿ ಪ್ರಶ್ನೆ ಸಂಖ್ಯೆ 1.5 ಬರುತ್ತಿಲ್ಲವೇ, ತ್ರಿಕೋನ ಮಿತಿ ಅಭ್ಯಾಸದಲ್ಲಿ ಎಂತಹ ಪ್ರಶ್ನೆಗಳು ಬರುತ್ತವೆ?, ಥೇಲ್ಸ್ ಪ್ರಮೇಯ, ಪ್ರಶ್ನೆ ಪತ್ರಿಕೆಯ ವಿನ್ಯಾಸದ ಕುರಿತು ಸಹಿತ ವಿದ್ಯಾರ್ಥಿಗಳು ಪ್ರಶ್ನೆಗಳನ್ನು ಕೇಳಿದರು.
ಅದೇ ರೀತಿ ಎಷ್ಟು ತಿಂಗಳು ಬೋಧನೆ ಕಾರ್ಯ ನಡೆಯುತ್ತದೆ, ಎಸೆಸೆಲ್ಸಿ ವಾರ್ಷಿಕ ಪರೀಕ್ಷೆ ಯಾವಾಗ ನಡೆಯುತ್ತದೆ, ಪೂರ್ಣ ದಿನ ಶಾಲೆಯನ್ನು ಯಾವಾಗ ಆರಂಭ ಮಾಡಲಾಗುತ್ತದೆ. ಕೊರೋನಾಗೆ ಪೂರ್ಣ ಲಸಿಕೆ ಯಾವಾಗ ಬರುತ್ತದೆ ಎಂಬ ಪ್ರಶ್ನೆಗಳು ಕೂಡ ಬಂದವು.
ಅತೀ ಹೆಚ್ಚಿನ ಪ್ರಶ್ನೆಗಳು ಶಂಕರನಾರಾಯಣ ಸರಕಾರಿ ಪದವಿ ಪೂರ್ವ ಕಾಲೇಜಿನಿಂದ ಬಂದವು. ಕಾರ್ಯಕ್ರಮದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎನ್.ಎಚ್.ನಾಗೂರ, ಶಿಕ್ಷಕರುಗಳಾದ ರಾಜೇಂದ್ರ ಭಟ್ ಎಂ., ಹರೀಶ್ ಶೆಟ್ಟಿ, ಆರ್.ನಾರಾಯಣ ಶೆಣೈ, ಯೋಗೀಂದ್ರ ನಾಯಕ್ ಉಪಸ್ಥಿತರಿದ್ದರು.







