ಎಂಡೋಸಲ್ಫಾನ್ ಪುನರ್ವಸತಿ ಕೇಂದ್ರಕ್ಕಾಗಿ ಗೃಹ ಸಚಿವರ ಭೇಟಿ

ಉಡುಪಿ, ಜ.10: ನಾಡಾ ಸೇನಾಪುರದಲ್ಲಿ ಕಾದಿರಿಸಿದ ಸರಕಾರಿ ಜಾಗದಲ್ಲಿ ಎಂಡೋಸಲ್ಫಾನ್ ಪೀಡಿತ ಅಂಗವಿಕಲರಿಗೆ ಪುನರ್ವಸತಿ ಕೇಂದ್ರ, ಸುಸಜ್ಜಿತ ಆಸ್ಪತ್ರೆ ಕಟ್ಟಡ ನಿರ್ಮಾಣಕ್ಕೆ ಹಣ ಬಿಡುಗಡೆಗೊಳಿಸುವಂತೆ ಕೋರಿ ಕರ್ನಾಟಕ ರಾಜ್ಯ ಅಂಗವಿಕಲರ ಹಾಗೂ ಪಾಲಕರ ಒಕ್ಕೂಟದ ಉಡುಪಿ ಜಿಲ್ಲಾ ಸಮಿತಿ ನೇತೃತ್ವದ ನಿಯೋಗ ಜ.8ರಂದು ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರನ್ನು ಬೆಂಗಳೂರಿನ ಗೃಹ ಕಚೇರಿಯಲ್ಲಿ ಭೇಟಿ ಮಾಡಿ ಮನವಿ ಸಲ್ಲಿಸಿತು.
ಎಂಡೋ ಪೀಡಿತ ಅಂಗವಿಕಲರಿಗಾಗಿ ಸೇನಾಪುರದಲ್ಲಿ ಕಾದಿರಿಸಿದ ಐದು ಎಕರೆ ಸರಕಾರಿ ಜಾಗದಲ್ಲಿ ಸಮಾರು 10 ಕೋಟಿ ರೂ. ವೆಚ್ಚದಲ್ಲಿ ಎಂಡೋಸ ಲ್ಫಾನ್ ಪೀಡಿತ ಅಂಗವಿಕಲರಿಗೆ ಪುನರ್ವಸತಿ ಕೇಂದ್ರ ಮತ್ತು ಸುಸಜ್ಜಿತ ಆಸ್ಪತ್ರೆ ಕಟ್ಟಡ ನಿರ್ಮಾಣ ಮಾಡಲು ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಕಚೇರಿಯಿಂದ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ನಿಯೋಗದಲ್ಲಿ ಒಕ್ಕೂಟದ ಉಡುಪಿ ಜಿಲ್ಲಾ ಗೌರವಾಧ್ಯಕ್ಷ ವೆಂಕಟೇಶ್ ಕೋಣಿ, ಅಧ್ಯಕ್ಷ ಮಂಜುನಾಥ ಹೆಬ್ಬಾರ್ ಕಾಲ್ತೋಡು, ನಾಗರಾಜ ತಲ್ಲೂರು, ಗಣಪತಿ ಪೂಜಾರಿ ಅಮಾಸೆಬೈಲ್, ದೇವೇಂದ್ರ ಸುವರ್ಣ ವಡ್ಡರ್ಸೆ, ನಾಗಶ್ರೀ ಬೈಂದೂರು, ಮಮತಾ ಬೆಳ್ವೆ, ಸದಾಶಿವ ಮುದ್ರಾಡಿ, ಹರೀಶ ಕಾರ್ಕಳ, ಪ್ರಕಾಶ ಈದು ಮೊದಲಾದವರು ಉಪಸ್ಥಿತರಿದ್ದರು.





