‘ಕಲಾವಿದನಿಗೆ, ಸಂಸ್ಥೆಗೆ ಬದ್ಧತೆ ಇಲ್ಲದಿದ್ದರೆ ಬೀದಿನಾಟಕ ಸಾಧ್ಯವಿಲ್ಲ’
ಬೀದಿನಾಟಕ ಸಂವಾದದಲ್ಲಿ ಐ.ಕೆ.ಬೊಳುವಾರು

ಉಡುಪಿ, ಜ.10: ಕಲಾವಿದನಿಗೆ ಹಾಗೂ ನಾಟಕವಾಡುವ ಸಂಸ್ಥೆಗೆ ಬದ್ಧತೆ ಇರದಿದ್ದರೆ ಬೀದಿ ನಾಟಕ ಮಾಡಲು ಸಾಧ್ಯವಾಗು ವುದಿಲ್ಲ ಎಂದು ಪುತ್ತೂರಿನ ರಂಗಕರ್ಮಿ ಐ.ಕೆ.ಬೊಳುವಾರು ಅಭಿಪ್ರಾಯ ಪಟ್ಟಿದ್ದಾರೆ.
ಉಡುಪಿ ರಥಬೀದಿ ಗೆಳೆಯರು ಸಂಘಟನೆಯ ವತಿಯಿಂದ ಎಂಜಿಎಂ ಕಾಲೇಜಿನ ಗೀತಾಂಜಲಿ ಸಭಾಭವನದಲ್ಲಿ ಶನಿವಾರ ನಡೆದ ಬೀದಿ ನಾಟಕಗಳ ಹರಿಕಾರರೆಂದು ಪರಿಗಣಿಸಲ್ಪಡುವ ಸಫ್ದರ್ ಹಾಶ್ಮಿ ನೆನಪಿನ ‘ಹಲ್ಲಾ ಬೋಲ್’ ಕಾರ್ಯಕ್ರಮದಲ್ಲಿ ಬೀದಿ ನಾಟಕ ಗಳ ಪರಂಪರೆ, ಪ್ರಯೋಗ ಹಾಗೂ ವೌಲಿಕತೆಯ ಕುರಿತ ಸಂವಾದದಲ್ಲಿ ‘ಬೀದಿ ನಾಟಕಗಳ ಸಮಕಾಲೀನ ವೌಲಿಕತೆ’ ವಿಷಯದ ಕುರಿತು ಅವರು ಮಾತನಾಡುತಿದ್ದರು.
ಬೀದಿ ನಾಟಕ ಅಂದರೆ ಅದೊಂದು ಚಳವಳಿ. ಸಫ್ದರ್ ಹಾಶ್ಮಿ ಹೇಳಿದಂತೆ ನಾಟಕ ಕಲಾತ್ಮಕ ಆಗದೆ ಹೋದರೆ ಬೀದಿ ನಾಟಕ ಜನರಿಗೆ ರುಚಿಸಲ್ಲ. ಅದರ ಆಶಯ ಅವರನ್ನು ತಲುಪಲ್ಲ. ಯಕ್ಷಗಾನ ಜಗಮಗಿಸಿ, ಈಗಲೂ ನಮ್ಮನ್ನು ಸೆಳೆಯುತ್ತದೆ. ಸದ್ಯಕ್ಕೆ ನಮ್ಮ ಯಕ್ಷಗಾನವೇ ಗಟ್ಟಿ; ಹೇಳಬೇಕಾದ್ದನ್ನು ಯಕ್ಷಗಾನದ ಪಾತ್ರ ಹೇಳುತ್ತವೆ ಎಂದವರು ನುಡಿದರು.
‘ಬೀದಿ ನಾಟಕಗಳ ಆಶಯ ಮತ್ತು ಕೃತಿ’ ವಿಷಯದ ಕುರಿತು ಮಾತನಾಡಿದ ಮಂಗಳೂರಿನ ರಂಗಕರ್ಮಿ ಮೋಹನ್‌ಚಂದ್ರ, ಜನಗಳು ಓಡಾಡುವ ಬೀದಿಗಳೇ ಇಲ್ಲವಾಗಿರುವಾಗ, ಕಾರ್ಖಾನೆಗಳು ಮುಚ್ಚಿ ಕಾರ್ಪೋರೇಟ್ ಆಗಿ ರುವಾಗ, ಜನವಸತಿ ಪ್ರದೇಶ ಗಳಲ್ಲಿ ಕಾಂಪ್ಲೆಕ್ಸ್ ತಲೆ ಎತ್ತಿ ನಿಂತಿರುವಾಗ ಬೀದಿ ನಾಟಕವನ್ನು ಎಲ್ಲಿ ಮತ್ತು ಯಾರಿಗೆ ಮಾಡೋದು ಎಂದವರು ಪ್ರಶ್ನಿಸಿದರು.
ಇಂದು ಬೀದಿ ನಾಟಕ ಮಾಡುವ ಕಲಾವಿದ ಹುಟ್ಟುತ್ತಿಲ್ಲ. ಚಳವಳಿಗಳಾಗಿ ಹುಟ್ಟಿದ ಬೀದಿನಾಟಕಗಳು ಸಾಂಸ್ಥಿಕವಾಗಿವೆ.. ಮುಂದೆ ಅದು ಮಠ ಸೇರುವ ಸಾಧ್ಯತೆಗಳಿವೆ. ಹೀಗಾಗಿ ನಾವಿಂದು ಎಚ್ಚೆತ್ತುಕೊಳ್ಳಬೇಕಾಗಿದೆ ಎಂದು ಮೋಹನ್ ಚಂದ್ರ ಹೇಳಿದರು.
‘ರಂಗ ಚಳವಳಿಯ ಮುಂಚೂಣಿಯಲ್ಲಿ ಬೀದಿ ನಾಟಕಗಳು’ ವಿಷಯದ ಕುರಿತು ಮಾತನಾಡಿದ ಸಕಲೇಶಪುರದ ಹಿರಿಯ ರಂಗ ಕರ್ಮಿ ಪ್ರಸಾದ್ ರಕ್ಷಿದಿ, ಭಾರತದಲ್ಲಿ ಬ್ರಿಟಿಷರ ಕಾಲದಲ್ಲಿ ಬೀದಿ ನಾಟಕದ ಲಕ್ಷಣ ಇತ್ತು. ಲಾವಣಿಕಾರರ ಲಾವಣಿಗಳಲ್ಲಿ ಇದರ ಉಲ್ಲೇಖವಿದೆ. ಬೀದಿ ನಾಟಕ ಆಯಾ ಕಾಲದ ಅವಶ್ಯಕತೆ ಎಂದರು.
ಟಿ.ಎನ್.ಶೇಷನ್ ಇದ್ದಾಗ ಚುನಾವಣೆ ಸಂದರ್ಭದಲ್ಲಿ ಬೀದಿ ನಾಟಕಗಳು ಹೆಚ್ಚು ಪ್ರಚುರದಲ್ಲಿತ್ತು. ಈ ಹಿಂದಿನ ಬೀದಿ ನಾಟಕ ಮತ್ತು ಅದರ ಆಶಯ ಕೊನೆಯುಸಿರೆಳೆದಿದೆ. ಬೀದಿ ನಾಟಕದ ಕಾಲ ಇದಲ್ಲ. ಮುಂದೇನು ಅಂತ ಚರ್ಚೆ ಮಾಡಿ ದಾರಿ ಕಂಡು ಕೊಳ್ಳಬೇಕು ಎಂದು ರಕ್ಷಿದಿ ನುಡಿದರು.
ಸಂವಾದದಲ್ಲಿ ಯುವ ರಂಗಕರ್ಮಿಗಳಾದ ಯೋಗೇಶ್ ಬಂಕೇಶ್ವರ, ಕ್ರಿಸ್ಟೋಫರ್ ಡಿಸೋಜ, ವಿದ್ದು ಉಚ್ಚಿಲ, ವಿಘ್ನೇಶ್ ಹೊಳ್ಳ ತೆಕ್ಕಾರು, ಭುವನ್ ಮಣಿಪಾಲ ಹಾಗೂ ಶಿಲ್ಪಾ ಶೆಟ್ಟಿ ಪಾಲ್ಗೊಂಡರು.
ಸಮುದಾಯ ಕುಂದಾಪುರದ ಅಧ್ಯಕ್ಷ ಉದಯ ಗಾಂವ್ಕರ್ ಸಂವಾದದ ಸಮನ್ವಯಕಾರರಾಗಿದ್ದರು. ಸಂತೋಷ್ ನಾಯಕ್ ಪಟ್ಲ ನಿರೂಪಿಸಿದರು. ಕಾರ್ಯಕ್ರಮದುದ್ದಕ್ಕೂ ಸಮುದಾಯ ಕುಂದಾಪುರ ತಂಡದ ಸತ್ಯನಾ ಕೊಡೇರಿ, ವಾಸು ಗಂಗೇರ ಮತ್ತು ತಂಡದಿಂದ ಜನಮನದ ಹಾಡುಗಳಿದ್ದವು.
ಈಗಿನ ಪ್ರಭುತ್ವದ ವಿರುದ್ಧ ಬೀದಿ ನಾಟಕ ಮಾಡುವ ತಂಡಗಳಾಗಲಿ, ನಟರಾಗಲಿ, ಹೋರಾಟ ಮನೋಭಾವದ ಜನರು ಇಲ್ಲವಾಗಿದೆ. ಹೀಗಾಗಿ ಕಲಾವಿದರು ಆ್ಯಕ್ಟಿವಿಸ್ಟ್‌ಗಳಾಗಬೇಕು.
-ಮೋಹನಚಂದ್ರ, ರಂಗಕರ್ಮಿ ಮಂಗಳೂರು








