ಉ.ಪ್ರ:ಏಳು ತಿಂಗಳ ಗರ್ಭಿಣಿಯಾಗಿದ್ದ ಅತ್ಯಾಚಾರ ಸಂತ್ರಸ್ತೆಯ ಸಾವು
ಬರೇಲಿ (ಉ.ಪ್ರ.),ಜ.10: ಅತ್ಯಾಚಾರಕ್ಕೊಳಗಾಗಿ ಏಳು ತಿಂಗಳ ಗರ್ಭಿಣಿಯಾಗಿದ್ದ 15 ಹರೆಯದ ಬಾಲಕಿಯ ಆರೋಗ್ಯ ಹದಗೆಟ್ಟು ಇಲ್ಲಿಯ ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ ಎಂದು ಪೊಲೀಸರು ರವಿವಾರ ತಿಳಿಸಿದರು.
ಗರ್ಭಿಣಿ ತೀವ್ರ ಅಸ್ವಸ್ಥಗೊಂಡಿದ್ದ ಹಿನ್ನೆಲೆಯಲ್ಲಿ ಆಕೆಯನ್ನು ಶನಿವಾರ ರಾತ್ರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು,ಗುರುವಾರ ರಾತ್ರಿ ಕೊನೆಯುಸಿರೆಳೆದಿದ್ದಾಳೆ.
ಬಾಲಕಿಯನ್ನು ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ಕರೆತರಲಾಗಿತ್ತು ಮತ್ತು ಆಕೆಯ ಸ್ಥಿತಿ ಇನ್ನಷ್ಟು ಉಲ್ಬಣಿಸಿತ್ತು. ವೈದ್ಯರ ಎಲ್ಲ ಪ್ರಯತ್ನಗಳ ಹೊರತಾಗಿಯೂ ಆಕೆಯನ್ನು ಉಳಿಸಲಾಗಲಿಲ್ಲ ಎಂದು ಆಸ್ಪತ್ರೆಯ ಪ್ರಭಾರ ಅಧೀಕ್ಷಕ ಡಾ.ಸುಬೋಧ ಶರ್ಮಾ ಅವರು ಸುದ್ದಿಗಾರರಿಗೆ ತಿಳಿಸಿದರು.
ಸೋಂಕಿನಿಂದ ಬಾಲಕಿಯ ಸಾವು ಸಂಭವಿಸಿದೆ ಎಂದು ಮರಣೋತ್ತರ ಪರೀಕ್ಷಾ ವರದಿಯು ತಿಳಿಸಿದೆ. ಮೃತಳ ಶರೀರವನ್ನು ಹೆಚ್ಚಿನ ಪರೀಕ್ಷೆಗಾಗಿ ಕಾದಿರಿಸಲಾಗಿದೆ ಎಂದು ಬರೇಲಿ ಎಸ್‌ಎಸ್‌ಪಿ ರೋಹಿತ್ ಸಿಂಗ್ ಸಜ್ವಾನ್ ತಿಳಿಸಿದರು.
Next Story





