ತೊಕ್ಕೊಟ್ಟು: ಮಾಂಸದಂಗಡಿಗೆ ಬೆಂಕಿ ಹಚ್ಚಿದವರ ಬಂಧನಕ್ಕೆ ಪಿಎಫ್‌ಐ ಆಗ್ರಹ
ಮಂಗಳೂರು, ಜ.10: ಉಳ್ಳಾಲ ನಗರಸಭಾ ವ್ಯಾಪ್ತಿಯ ತೊಕ್ಕೊಟ್ಟು ಒಳಪೇಟೆಯಲ್ಲಿ ಮಾಂಸ ವ್ಯಾಪಾರದ ಶೆಡ್‌ಗಳಿಗೆ ಬೆಂಕಿ ಹಚ್ಚಿ ಕೋಮುಗಲಭೆ ಸೃಷ್ಟಿಸಲು ಪ್ರಯತ್ನಿಸಿರುವುದನ್ನು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಮಂಗಳೂರು ನಗರಾಧ್ಯಕ್ಷ ಅಬ್ದುಲ್ ಖಾದರ್ ತೀವ್ರವಾಗಿ ಖಂಡಿಸಿದ್ದಾರೆ.
ಇತ್ತೀಚೆಗೆ ತಮ್ಮ ಜೀವನೋಪಾಯಕ್ಕಾಗಿ ಕಾನೂನುಬದ್ಧವಾಗಿ ಜಾನುವಾರು ವಹಿವಾಟು ನಡೆಸುತ್ತಿದ್ದ ಅಲ್ಪಸಂಖ್ಯಾತ ಬಡ ವ್ಯಾಪಾರಿಗಳ ಮೇಲೆ ಅಕ್ರಮ ಜಾನುವಾರು ಸಾಗಾಟ ನೆಪವೊಡ್ಡಿ ಬಜರಂಗದಳದ ಕಾರ್ಯಕರ್ತರು ಹಲ್ಲೆ, ಮಾರಣಾಂತಿಕ ದಾಳಿ, ಕೊಲೆಯತ್ನ, ಲೂಟಿ ನಡೆಸುವುದು ಸಾಮಾನ್ಯವಾಗಿತ್ತು. ಪೊಲೀಸ್ ಇಲಾಖೆ ಇಂತಹ ಸಮಾಜಘಾತುಕ ಸಂಘಟನೆಗಳಲ್ಲಿ ಕೆಲಸ ಮಾಡುವವರ ವಿರುದ್ಧ ಯಾವುದೇ ಕಠಿಣ ಕ್ರಮ ಕೈಗೊಳ್ಳದ ಕಾರಣ ಇಂತಹ ಘಟನೆಗಳು ಮರುಕಳಿಸಲು ಕಾರಣವಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಮಾಂಸ ವ್ಯಾಪಾರ ನಡೆಸುವ ಅಂಗಡಿಗಳ ಪರವಾನಿಗೆ ರದ್ದುಗೊಳಿಸುವಂತೆ ಮತ್ತು ಅಂಗಡಿಗಳನ್ನು ಮುಚ್ಚುವಂತೆ ಆಗ್ರಹಿಸಿ ವಿಶ್ವ ಹಿಂದೂ ಪರಿಷತ್, ಬಜರಂಗದಳ ಸಂಘಟನೆಗಳು ಕಳೆದ ಕೆಲವು ದಿನಗಳ ಹಿಂದೆ ಉಳ್ಳಾಲ ನಗರಸಭೆ ಮತ್ತು ಉಳ್ಳಾಲ ಪೊಲೀಸ್ ಠಾಣೆಗೆ ಮನವಿ ಮಾಡಿದ್ದವು. ಈ ಸಂಘಟನೆಗಳಿಗೆ ಸೇರಿದವರೇ ಅಂಗಡಿಗೆ ರಾತ್ರೋರಾತ್ರಿ ಬೆಂಕಿ ಹಚ್ಚಿರುವ ಸಾಧ್ಯತೆಯಿದೆ. ಮಾಂಸದಂಗಡಿ ಮುಚ್ಚಿಸಲು ಮನವಿ ನೀಡಿದವರನ್ನು ಠಾಣೆಗೆ ಕರೆಸಿ ಪೊಲೀಸರು ತನಿಖೆ ನಡೆಸಬೇಕು.
ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅಬ್ದುಲ್ ಖಾದರ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.







