ಇಂಡೋನೇಶ್ಯ: ಭೂಕುಸಿತಕ್ಕೆ ಕನಿಷ್ಠ 11 ಬಲಿ
ಮಣ್ಣಿನ ರಾಶಿಯಲ್ಲಿ ಸಿಲುಕಿರುವ ಹಲವರು ►ಕಾರ್ಯಾಚರಣೆಗೆ ಧಾವಿಸಿದ್ದ ರಕ್ಷಣಾ ತಂಡವೂ ಜೀವಂತ ಸಮಾಧಿ

photo-TOI
ಜಕಾರ್ತ,ಜ.10: ಇಂಡೊನೇಶ್ಯದ ಪಶ್ಚಿಮ ಜಾವಾ ಪ್ರಾಂತದಲ್ಲಿ ಶನಿವಾರ ಸಂಭವಿಸಿದ ಭೀಕರ ಭೂಕುಸಿತದ ಘಟನೆಗಳಲ್ಲಿ 6 ವರ್ಷದ ಬಾಲಕ ಸೇರಿದಂತೆ ಕನಿಷ್ಠ 11 ಮಂದಿ ಮೃತಪಟ್ಟಿದ್ದು ಹಲವಾರು ಮಂದಿ ನಾಪತ್ತೆಯಾಗಿದ್ದಾರೆ.
ಶನಿವಾರ ಸಂಜೆಯಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಸುಮೆಡಾಂಗ್ ಪಟ್ಟಣ ಹಾಗೂ ಆಸುಪಾಸಿನ ಪ್ರದೇಶಗಳಲ್ಲಿ ವ್ಯಾಪಕ ಹಾನಿಯಾಗಿದೆ. ಭೂಕುಸಿತದಿಂದಾಗಿ ಮಣ್ಣಿನ ರಾಶಿಯಲ್ಲಿ ಜೀವಂತವಾಗಿ ಸಿಕ್ಕಿಹಾಕಿಕೊಂಡಿರುವ ಸ್ಥಳೀಯ ನಿವಾಸಿಗಳ ಶೋಧಕಾರ್ಯಾಚರಣೆಯಲ್ಲಿ ತೊಡಗಿದ್ದ ರಕ್ಷಣಾ ತಂಡವೊಂದು, ಮತ್ತೊಮ್ಮೆ ಸಂಭವಿಸಿದ ಭೂಕುಸಿತದಿಂದಾಗಿ ಜೀವಂತ ಸಮಾಧಿಯಾಗಿದೆಯೆಂದು, ಬಾಂಡುಂಗ್ನ ರಕ್ಷಣಾ ಏಜೆನ್ಸಿಯ ವಕ್ತಾರೆ ಸೇನಿ ವುಲಾನ್ದಾರಿ ತಿಳಿಸಿದ್ದಾರೆ.
ಕಾಲಕಾಲಕ್ಕೆ ಧಾರಾಕಾರ ಮಳೆಯಾಗುವ ಇಂಡೋನೇಶ್ಯದ ದ್ವೀಪಸ್ತೋಮಗಳಲ್ಲಿ ಭೀಕರ ಭೂಕುಸಿತಗಳು ಹಾಗೂ ದಿಢೀರ್ ಪ್ರವಾಹಗಳು ಸಾಮಾನ್ಯವಾಗಿ ಬಿಟ್ಟಿವೆ. ಕಳೆದ ಸೆಪ್ಟೆಂಬರ್ನಲ್ಲಿ ಬೋರ್ನಿಯೋ ದ್ವೀಪದಲ್ಲಿಯೂ ಭಾರೀ ಭೂಕುಸಿತವಾಗಿದ್ದು ಕನಿಷ್ಠ 11 ಮಂದಿ ಸಾವಿಗೀಡಾಗಿದ್ದರು. ಇಕ್ಕೂ ಕೆಲವು ತಿಂಗಳುಗಳ ಮೊದಲು ಸುಲಾವೆಸಿ ದ್ವೀಪದಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಡಜನ್ಗಟ್ಟಲೆ ಮಂದಿ ಸಾವನ್ನಪ್ಪಿದ್ದರು.
ಇಂಡೋನೇಶ್ಯದ ಒಟ್ಟು ಜನಸಂಖ್ಯೆಯ ಅರ್ಧದಷ್ಟು ಮಂದಿ ಅಂದರೆ ಸುಮಾರು 12.50 ಕೋಟಿ ಜನರು ಭೂಕುಸಿತದ ಅಪಾಯವಿರುವ ಪ್ರದೇಶಗಳಲ್ಲಿ ವಾಸವಾಗಿರುತ್ತಾರೆ.







