ಕಾಬೂಲ್: ಬಾಂಬ್ ದಾಳಿಗೆ 3 ಬಲಿ
ಕಾಬೂಲ್,ಜ.10: ಅಫ್ಘಾನ್ ರಾಜಧಾನಿ ಕಾಬೂಲ್‌ನಲ್ಲಿ ರವಿವಾರ ನಡೆದ ಬಾಂಬ್ ದಾಳಿಯೊಂದರಲ್ಲಿ ಸಾರ್ವಜನಿಕ ರಕ್ಷಣಾ ಪಡೆಯ ವಕ್ತಾರ ಹಾಗೂ ಅವರ ಇಬ್ಬರು ಸಹೋದ್ಯೋಗಿಗಳು ಸಾವನ್ನಪ್ಪಿದ್ದಾರೆ. ಈ ಮೂವರು ಸಂಚರಿಸುತ್ತಿದ್ದ ವಾಹನವನ್ನು ಗುರಿಯಾಗಿರಿಸಿ, ಉಗ್ರರು ಬಾಂಬ್ ದಾಳಿ ನಡೆಸಿದ್ದಾರೆಂದು ಅಫ್ಘಾನ್ ಗೃಹ ಸಚಿವಾಲಯ ತಿಳಿಸಿದೆ. ದಾಳಿಯಲ್ಲಿ ಸಾವನ್ನಪ್ಪಿರುವ ಸಾರ್ವಜನಿಕ ರಕ್ಷಣಾ ಪಡೆಯ ವಕ್ತಾರ ಝಿಯಾ ವಾದನ್ ಈ ಹಿಂದೆ ಅಫ್ಘಾನಿಸ್ತಾನದ ಹಲವಾರು ಮಾಧ್ಯಮ ಜಾಲತಾಣಗಳಲ್ಲಿ ಕೆಲಸ ಮಾಡಿದ್ದರು. ಕಾಬೂಲ್‌ನ ಪೂರ್ವ ಭಾಗದಲ್ಲಿ ವಾಹನಸಂಚಾರ ದಟ್ಟಣೆಯ ಸಂದರ್ಭದಲ್ಲಿ ವಾದನ್ ಹಾಗೂ ಅವರ ಸಹೋದ್ಯೋಗಿಗಳು ಸಂಚರಿಸುತ್ತಿದ್ದ ವಾಹನವನ್ನು ಸುಧಾರಿತ ಸ್ಫೋಟಕ ಸಾಧನದಿಂದ ಸ್ಫೋಟಿಸಲಾಗಿದೆಯೆಂದು ಗೃಹ ಸಚಿವಾಲಯದ ವಕ್ತಾರ ತಾರೀಖ್ ಅರಿಯಾನ್ ತಿಳಿಸಿದ್ದಾರೆ. ವಾದಾನ್ ಅವರು ವಕ್ತಾರರಾಗಿ ಕಾರ್ಯನಿರ್ವಹಿಸುತ್ತಿರುವ ರಾಷ್ಟ್ರೀಯ ಸಾರ್ವಜನಿಕ ಸುರಕ್ಷತಾ ಪಡೆಯುಯು ಗೃಹ ಸಚಿವಾಲಯದ ಆಧೀನದಲ್ಲಿರುವ ಭದ್ರತಾ ಸಂಸ್ಥೆಯಾಗಿದ್ದು, ಅದು ಅಫ್ಘಾನಿಸ್ತಾನಾದ್ಯಂತ ಕಾರ್ಯನಿರ್ವಹಿಸುತ್ತಿರುವ ಅಂತಾರಾಷ್ಟ್ರೀಯ ಸಂಘಟನೆಗಳಿಗೆ ಕಾವಲುಗಾರರನ್ನು ನಿಯೋಜಿಸುತ್ತದೆ.





