ಮುಂಬೈ ದಾಳಿಗೂ ಲಖ್ವಿಯನ್ನು ಹೊಣೆ ಮಾಡಿ: ಪಾಕ್‌ಗೆ ಅಮೆರಿಕ ಒತ್ತಾಯ

ವಾಶಿಂಗ್ಟನ್,ಜ.10: ಭಯೋತ್ಪಾದನೆಗೆ ಹಣಕಾಸು ನೆರವು ಪೂರೈಕೆ ಪ್ರಕರಣಕ್ಕೆ ಸಂಬಂಧಿಸಿ ಲಷ್ಕರೆ ತಯ್ಯಬಾ ಉಗ್ರಗಾಮಿ ಗುಂಪಿನ ಕಾರ್ಯನಿರ್ವಹಣಾ ಕಮಾಂಡರ್ ಝುಕಿಯುರ್ರಹ್ಮಾನ್ ಲಖ್ವಿ ದೋಷಿಯೆಂದು ಘೋಷಿಸಿದ ಪಾಕ್ ನ್ಯಾಯಾಲಯದ ತೀರ್ಪನ್ನು ಅಮೆರಿಕವು ಸ್ವಾಗತಿಸಿದೆ. ಆದರೆ 2008ರ ಮುಂಬೈ ದಾಳಿ ಸೇರಿದಂತೆ ವಿವಿಧ ಭಯೋತ್ಪಾದನೆ ಪ್ರಕರಣಗಳಲ್ಲಿಯೂ ಆತನನ್ನು ಹೊಣೆಗಾರನಾಗಿ ಮಾಡಬೇಕೆಂದು ಅದು ಇಸ್ಲಾಮಾಬಾದನ್ನು ಒತ್ತಾಯಿಸಿದೆ.
ಭಯೋತ್ಪಾದನೆಗೆ ಹಣಕಾಸು ನೆರವು ಒದಗಿಸಿದ ಪ್ರಕರಣದಲ್ಲಿ ಪಾಕಿಸ್ತಾನದ ಭಯೋತ್ಪಾದನಾ ವಿರೋಧಿ ನ್ಯಾಯಾಲಯವು ಲಖ್ವಿಗೆ ಶುಕ್ರವಾರ 5 ವರ್ಷಗಳ ಜೈಲು ಶಿಕ್ಷೆಯನ್ನು ಘೋಷಿಸಿತ್ತು. ಪಾಕಿಸ್ತಾನದಲ್ಲಿ ಸ್ವಚ್ಛಂದವಾಗಿ ಅಡ್ಡಾಡುತ್ತಿರುವ ಉಗ್ರರ ವಿರುದ್ಧ ಕಾನೂನುಕ್ರಮ ಕೈಗೊಳ್ಳಬೇಕೆಂಬ ಬಗ್ಗೆ ಅಂತಾರಾಷ್ಟ್ರೀಯ ಒತ್ತಡವು ಇಸ್ಲಾಮಾಬಾದ್ ಮೇಲೆ ಹೆಚ್ಚುತ್ತಿರುವ ಸಂದರ್ಭದಲ್ಲೇ ಪಾಕ್ ನ್ಯಾಯಾಲಯದಿಂದ ಈ ತೀರ್ಪು ಹೊರಬಿದ್ದಿದೆ.
ನ್ಯಾಯಾಲಯದ ತೀರ್ಪಿಗೆ ಅಮೆರಿಕ ವಿದೇಶಾಂಗ ಇಲಾಖೆಯ ದಕ್ಷಿಣ ಹಾಗೂ ಕೇಂದ್ರ ಏಶ್ಯ ಬ್ಯೂರೋ ಶನಿವಾರ ಟ್ವಿಟ್ಟರ್‌ನಲ್ಲಿ ಪ್ರತಿಕ್ರಿಯಿಸಿದ್ದು, ‘‘ ಝಕಿಯುರ್ರಹ್ಮಾನ್ ಲಖ್ವಿಗೆ ಇತ್ತೀಚೆಗೆ ಶಿಕ್ಷೆ ಪ್ರಕಟವಾಗಿರುವುದು ನಮಗೆ ಉತ್ತೇಜನ ನೀಡಿದೆ’’ ಎಂದು ಹೇಳಿದೆ.
ಆದಾಗ್ಯೂ ಆತನ ಅಪರಾಧಗಳು ಭಯೋತ್ಪಾದನೆಗೆ ಹಣಕಾಸು ಪೂರೈಕೆಗೆ ಮಾತ್ರವೇ ಸೀಮಿತವಾಗಿಲ್ಲ. ಮುಂಬೈ ಭಯೋತ್ಪಾದಕ ದಾಳಿ ಸೇರಿದಂತೆ ವಿವಿಧ ಭಯೋತ್ಪಾದಕ ಕೃತ್ಯಗಳಲ್ಲಿ ಆತನನ್ನು ಹೊಣೆಗಾರನನ್ನಾಗಿಸಬೇಕು’’ ಎಂದು ಅದು ಹೇಳಿದೆ.







