ಭಾರತದಲ್ಲಿ 7 ತಿಂಗಳಲ್ಲಿ 33,000 ಟನ್ ಕೋವಿಡ್-19 ತ್ಯಾಜ್ಯ ಉತ್ಪನ್ನ: ವರದಿ

ಹೊಸದಿಲ್ಲಿ, ಜ.10: ಕಳೆದ 7 ತಿಂಗಳಲ್ಲಿ ಭಾರತದಲ್ಲಿ ಸುಮಾರು 33,000 ಟನ್‌ನಷ್ಟು ಕೋವಿಡ್-19 ಬಯೊಮೆಡಿಕಲ್ ತ್ಯಾಜ್ಯ ಉತ್ಪನ್ನವಾಗಿದ್ದು ಇದರಲ್ಲಿ ಮಹಾರಾಷ್ಟ್ರದ ಕೊಡುಗೆ ಅತ್ಯಧಿಕ(3,587 ಟನ್)ವಾಗಿದೆ ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ(ಸಿಪಿಸಿಬಿ)ಯ ಅಂಕಿಅಂಶ ತಿಳಿಸಿದೆ.
2020 ಜೂನ್‌ನಿಂದ ಎಲ್ಲಾ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ 32,994 ಟನ್ ಬಯೊಮೆಡಿಕಲ್ ತ್ಯಾಜ್ಯ ಉತ್ಪನ್ನವಾಗಿದ್ದು ಇದರಲ್ಲಿ ಅಕ್ಟೋಬರ್ ತಿಂಗಳಿನಲ್ಲೇ 5,500 ಟನ್ ತ್ಯಾಜ್ಯ ಉತ್ಪನ್ನವಾಗಿದೆ. ದೇಶದಾದ್ಯಂತದ 198 ಸಾಮಾನ್ಯ ಬಯೊಮೆಡಿಕಲ್ ತ್ಯಾಜ್ಯ ಸಂಸ್ಕರಣಾ ಕೇಂದ್ರಗಳ ಮೂಲಕ ಸಂಗ್ರಹಿಸಿ ವಿಲೇವಾರಿ ಮಾಡಲಾಗಿದೆ ಎಂದು ವರದಿ ತಿಳಿಸಿದೆ.
ಪಿಪಿಇ ಕಿಟ್‌ಗಳು, ಮಾಸ್ಕ್‌ಗಳು, ಶೂ ಕವರ್‌ಗಳು, ಕೈಗವಸು, ರಕ್ತಸಿಕ್ತ ಬಟ್ಟೆ, ಬ್ಯಾಂಡೇಜ್, ಗಾಯಕ್ಕೆ ಹಾಕುವ ಪಟ್ಟಿಗಳು, ಹತ್ತಿಯ ತುಂಡುಗಳು, ರಕ್ತ ಅಥವಾ ದೇಹದ ದ್ರವ ಒಳಗೊಂಡಿರುವ ಹಾಸಿಗೆಯ ಕವರ್, ಬಟ್ಟೆ ಇತ್ಯಾದಿಗಳು ಬಯೊಮೆಡಿಕಲ್ ತ್ಯಾಜ್ಯಗಳಾಗಿವೆ. ಮಹಾರಾಷ್ಟ್ರದಲ್ಲಿ 5,367 ಟನ್, ಕೇರಳ- 3,300 ಟನ್, ಗುಜರಾತ್-3,086 ಟನ್, ತಮಿಳುನಾಡು-2,806 ಟನ್, ಉತ್ತರಪ್ರದೇಶ-2,502 ಟನ್, ದಿಲ್ಲಿ-2,471 ಟನ್, ಪ.ಬಂಗಾಳ-2,095 ಟನ್, ಕರ್ನಾಟಕ- 2,026 ಟನ್ ಅತೀ ಹೆಚ್ಚು ತ್ಯಾಜ್ಯ ಉತ್ಪನ್ನವಾದ 8 ರಾಜ್ಯಗಳಾಗಿವೆ.
ಡಿಸೆಂಬರ್‌ನಲ್ಲಿ ಸುಮಾರು 4,530 ಟನ್, ನವೆಂಬರ್‌ನಲ್ಲಿ 4,864 ಟನ್, ಅಕ್ಟೋಬರ್‌ನಲ್ಲಿ 5,597 ಟನ್, ಸೆಪ್ಟಂಬರ್‌ನಲ್ಲಿ 5,490 ಟನ್ ತ್ಯಾಜ್ಯ ಉತ್ಪನ್ನವಾಗಿದೆ. ಹೀಗೆ ಉತ್ಪನ್ನವಾಗುವ ಬಯೊಮೆಡಿಕಲ್ ತ್ಯಾಜ್ಯಗಳನ್ನು ಆರೋಗ್ಯ ಕೇಂದ್ರ, ಕ್ವಾರಂಟೈನ್ ಕೇಂದ್ರ, ಮನೆ, ಸ್ಯಾಂಪಲ್ ಸಂಗ್ರಹ ಕೇಂದ್ರ, ಪ್ರಯೋಗಾಲಯಗಳು, ಮಾಲಿನ್ಯ ನಿಯಂತ್ರಣ ಮಂಡಳಿಗಳು, ನಗರಾಡಳಿತ ಸಂಸ್ಥೆಗಳು ಮತ್ತು ಸಾಮಾನ್ಯ ಬಯೊಮೆಡಿಕಲ್ ತ್ಯಾಜ್ಯ ಸಂಸ್ಕರಣಾ ಕೇಂದ್ರಗಳಲ್ಲಿ ವಿಲೇವಾರಿ ಮಾಡುವ ಬಗ್ಗೆ ಕಳೆದ ಮಾರ್ಚ್‌ನಲ್ಲಿ ಸಿಪಿಸಿಬಿ ಮಾರ್ಗಸೂಚಿಯನ್ನು ಬಿಡುಗಡೆಗೊಳಿಸಿದೆ. ಅಲ್ಲದೆ ಕೊರೋನ ಸೋಂಕಿಗೆ ಸಂಬಂಧಿಸಿ ಬಯೊಮೆಡಿಕಲ್ ತ್ಯಾಜ್ಯದ ಸಂಗ್ರಹ ಮತ್ತು ವಿಲೇವಾರಿ ಪ್ರಕ್ರಿಯೆಯ ಮೇಲೆ ನಿಗಾ ಇರಿಸಲು ಕಳೆದ ಮೇ ತಿಂಗಳಿನಲ್ಲಿ ‘ಕೋವಿಡ್19 ಬಿಡಬ್ಲ್ಯುಎಂ’ ಮೊಬೈಲ್ ಆ್ಯಪ್ ಅನ್ನು ರೂಪಿಸಿದೆ.







