10 ರಾಜ್ಯಗಳಲ್ಲಿ ಹಕ್ಕಿ ಜ್ವರ ದೃಢ: ಕೇಂದ್ರ ಸರಕಾರ

ಹೊಸದಿಲ್ಲಿ, ಜ. 12: ಇದುವರೆಗೆ 10 ರಾಜ್ಯಗಳಲ್ಲಿ ಹಕ್ಕಿ ಜ್ವರ ದೃಢಪಟ್ಟಿದೆ ಎಂದು ಕೇಂದ್ರ ಸರಕಾರ ಸೋಮವಾರ ಹೇಳಿದೆ.
ಈ ಹಿನ್ನೆಲೆಯಲ್ಲಿ ನೀರಿನಾಗರದ ಸುತ್ತಮುತ್ತ, ಜೀವಂತ ಪಕ್ಷಿಗಳ ಮಾರುಕಟ್ಟೆ, ಮೃಗಾಲಯ ಹಾಗೂ ಕೋಳಿ ಸಾಕಣೆ ಕೇಂದ್ರಗಳಲ್ಲಿ ಕಣ್ಗಾವಲು ಹೆಚ್ಚಿಸಲು ಕೇಂದ್ರ ಸರಕಾರ ಒತ್ತು ನೀಡಿದೆ.
‘‘2021 ಜನವರಿ 11ರ ವರೆಗೆ ದೇಶದ 10 ರಾಜ್ಯಗಳಲ್ಲಿ ಹಕ್ಕಿ ಜ್ವರ ದೃಢಪಟ್ಟಿದೆ’’ ಎಂದು ಪಶು ಸಂಗೋಪನೆ ಹಾಗೂ ಹೈನುಗಾರಿಕೆ ಇಲಾಖೆಯ ಹೇಳಿಕೆ ತಿಳಿಸಿದೆ.
ಜನವರಿ 10ರ ವರೆಗೆ ಹಕ್ಕಿಜ್ವರ 7 ರಾಜ್ಯಗಳಾದ ಕೇರಳ, ರಾಜಸ್ಥಾನ, ಮಧ್ಯಪ್ರದೇಶ, ಹಿಮಾಚಲ ಪ್ರದೇಶ, ಹರ್ಯಾಣ, ಗುಜರಾತ್ ಹಾಗೂ ಉತ್ತರಪ್ರದೇಶದಲ್ಲಿ ದೃಢಪಟ್ಟಿತ್ತು.
ದಿಲ್ಲಿ, ಉತ್ತರಾಖಂಡ ಹಾಗೂ ಮಹಾರಾಷ್ಟ್ರಗಳಲ್ಲಿ ಸೋಮವಾರ ಹಕ್ಕಿ ಜ್ವರ ದೃಢಪಟ್ಟಿತ್ತು.
ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವಂತೆ ಹಾಗೂ ತಪ್ಪು ಮಾಹಿತಿ ಹರಡುವುದನ್ನು ತಡೆಯುವಂತೆ ಕೇಂದ್ರ ಸರಕಾರ ರಾಜ್ಯಗಳಲ್ಲಿ ವಿನಂತಿಸಿದೆ.
‘‘ನೀರಿನಾಗರಗಳ ಸುತ್ತಮುತ್ತ, ಜೀವಂತ ಹಕ್ಕಿಗಳ ಮಾರುಕಟ್ಟೆಗಳು, ಮೃಗಾಲಯ, ಕೋಳಿ ಸಾಕಣೆ ಕೇಂದ್ರ ಮೊದಲಾದ ಸ್ಥಳಗಳಲ್ಲಿ ಕಣ್ಗಾವಲು ಹೆಚ್ಚಿಸುವಂತೆ, ಇದರೊಂದಿಗೆ ಹಕ್ಕಿಗಳ ಕಳೇಬರವನ್ನು ಸಮರ್ಪಕ ರೀತಿಯಲ್ಲಿ ವಿಲೇವಾರಿ ಮಾಡುವಂತೆ ಹಾಗೂ ಕೋಳಿ ಸಾಕಣೆ ಕೇಂದ್ರಗಳಲ್ಲಿ ಜೈವಿಕ ಭದ್ರತೆಯನ್ನು ಸಶಕ್ತಗೊಳಿಸುವಂತೆ ಕೇಂದ್ರ ಸರಕಾರ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳಲ್ಲಿ ಮನವಿ ಮಾಡಿದೆ’’
ಹಕ್ಕಿಗಳ ಹತ್ಯೆ ಕಾರ್ಯಾಚರಣೆಗೆ ಸಾಕಷ್ಟು ಪಿಪಿಇ ಕಿಟ್‌ಗಳು ಹಾಗೂ ಅಗತ್ಯವಿರುವ ಪರಿಕರಗಳನ್ನು ಸಾಕಷ್ಟು ದಾಸ್ತಾನು ಇರಿಸುವಂತೆ ಕೇಂದ್ರ ಸರಕಾರ ರಾಜ್ಯಗಳಿಗೆ ನಿರ್ದೇಶಿಸಿದೆ.
ರೋಗದ ಸ್ಥಿತಿ ಗತಿ ಬಗ್ಗೆ ನಿಕಟ ಕಣ್ಗಾವಲು ಇರಿಸಲು ಹಾಗೂ ರೋಗ ಮಾನವನಿಗೆ ಹರಡುವ ಯಾವುದೇ ಅವಕಾಶವನ್ನು ತಪ್ಪಿಸಲು ಆರೋಗ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಪರಿಣಾಮಕಾರಿ ಸಂವಹನ ಹಾಗೂ ಸಹಭಾಗಿತ್ವದ ಖಾತರಿ ನೀಡುವಂತೆ ಕೇಂದ್ರ ಸರಕಾರ ರಾಜ್ಯ ಪಶು ಸಂಗೋಪನೆ ಇಲಾಖೆಗೆ ಸೂಚಿಸಿದೆ.
ಈ ನಡುವೆ, ರಾಜಸ್ಥಾನದ ಟೋಂಕ್, ಕರೌಲಿ, ಭಿಲ್ವಾರಾ ಜಿಲ್ಲೆಗಳಲ್ಲಿ ಹಾಗೂ ಗುಜರಾತ್‌ನ ವಲ್ಸದ, ವಡೋದರಾ ಹಾಗೂ ಸೂರತ್ ಜಿಲ್ಲೆಗಳಲ್ಲಿ ಕಾಗೆಗಳು, ವಲಸೆ ಕಾಡು ಹಕ್ಕಿಗಳ ಸಾವನ್ನು ಎನ್‌ಐಎಚ್‌ಎಸ್‌ಎಡಿ ದೃಢಪಡಿಸಿದೆ.
ಉತ್ತರಾಖಂಡದ ಕೊಟ್ದಾವರ್ ಹಾಗೂ ಡೆಹ್ರಾಡೂನ್ ಜಿಲ್ಲೆಗಳಲ್ಲಿ ಕಾಗೆಗಳ ಸಾವು ದೃಢಪಟ್ಟಿದೆ. ದಿಲ್ಲಿಯಲ್ಲಿ ಕಾಗೆಗಳು ಹಾಗೂ ಸಂಜಯ್ ಸರೋವರದಲ್ಲಿ ಬಾತುಕೋಳಿಗಳು ಸಾವನ್ನಪ್ಪಿರುವ ಬಗ್ಗೆ ದೃಢಪಟ್ಟಿದೆ.
ಮಹಾರಾಷ್ಟ್ರದ ಪರ್ಭಾನಿಯಲ್ಲಿ ಕೋಳಿಗಳಲ್ಲಿ ಹಕ್ಕಿ ಜ್ವರ ಕಂಡು ಬಂದಿದೆ. ಮುಂಬೈ, ಥಾಣೆ, ದಾಪೋಲಿ, ಬೀಡ್‌ನಲ್ಲಿ ಕಾಗೆಗಳಲ್ಲಿ ಹಕ್ಕಿಜ್ವರ ದೃಢಪಟ್ಟಿದೆ.
ಹರ್ಯಾಣದಲ್ಲಿ ಹಕ್ಕಿಜ್ವರ ಹರಡುವುದನ್ನು ತಡೆಯಲು ಕಂಟೈನ್ಮೆಂಟ್ ರೂಪಿಸಲಾಗಿದೆ ಹಾಗೂ ಸೋಂಕಿತ ಹಕ್ಕಿಗಳನ್ನು ಕೊಲ್ಲಲಾಗುತ್ತಿದೆ.







