ಕೋವಿಡ್-19; ಭಾರತದಲ್ಲಿ ಸಾವಿನ ಸಂಖ್ಯೆ ಶೇ. 1.44ಕ್ಕೆ ಇಳಿಕೆ
ಕಳೆದ 16 ದಿನಗಳಲ್ಲಿ ಪ್ರತಿ ದಿನ 300ಕ್ಕಿಂತ ಕಡಿಮೆ ಸಾವು

ಹೊಸದಿಲ್ಲಿ, ಜ. 10: ಭಾರತದಲ್ಲಿ ಕೋವಿಡ್-19 ಸಾವಿನ ಪ್ರಮಾಣದಲ್ಲಿ ಸ್ಥಿರವಾದ ಇಳಿಕೆ ಕಂಡು ಬಂದಿದೆ ಹಾಗೂ ಆಸ್ಪತ್ರೆಗೆ ದಾಖಲಾದ ಪ್ರಕರಣಗಳಲ್ಲಿ ಕೇಂದ್ರ, ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಪರಿಣಾಮಕಾರಿ ಕ್ಲಿನಿಕಲ್ ನಿರ್ವಹಣೆಯಲ್ಲಿನ ಕೇಂದ್ರೀಕೃತ ಪ್ರಯತ್ನಗಳಿಂದಾಗಿ ಅದು ಇನ್ನಷ್ಟು ಶೇ. 1.44ಕ್ಕೆ ಇಳಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ರವಿವಾರ ಹೇಳಿದೆ.
ಸರಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಪರಿಣಾಮಕಾರಿ ಕಂಟೈನ್ಮೆಂಟ್ ಕಾರ್ಯತಂತ್ರ, ಹೆಚ್ಚಿನ ಸಂಖ್ಯೆಯಲ್ಲಿ ಪರೀಕ್ಷೆ ಹಾಗೂ ಆರೈಕೆ ಶಿಷ್ಟಾಚಾರದ ಸಮಗ್ರ ಗುಣಮಟ್ಟ ಆಧರಿಸಿದ ಪ್ರಮಾಣೀಕೃತ ಕ್ಲಿನಿಕಲ್ ನಿರ್ವಹಣಾ ಶಿಷ್ಟಾಚಾರದಿಂದಾಗಿ ಹೊಸ ಸಾವಿನ ಸಂಖ್ಯೆಯಲ್ಲಿ ತೀವ್ರ ಇಳಿಕೆಯಾಗಿದೆ ಎಂದು ಅದು ಹೇಳಿದೆ. ದೇಶದಲ್ಲಿ ಕಳೆದ 16 ದಿನಗಳಲ್ಲಿ ದಿನ ನಿತ್ಯ 300ಕ್ಕಿಂತ ಕಡಿಮೆ ಕೋವಿಡ್-19 ಸಾವು ದಾಖಲಾಗಿದೆ ಎಂದು ಸಚಿವಾಲಯ ತಿಳಿಸಿದೆ.
ಕೋವಿಡ್ ನಿರ್ವಹಣೆ ಹಾಗೂ ಪ್ರತಿಕ್ರಿಯೆ ನೀತಿಯ ಒಂದು ಭಾಗವಾಗಿ ಕೇಂದ್ರ ಸರಕಾರ ಕೋವಿಡ್-19 ಸೋಂಕಿತರಿಗೆ ಕಂಟೈನ್ಮೆಂಟ್ ಬಗ್ಗೆ ಮಾತ್ರ ಗಮನ ಕೇಂದ್ರೀಕರಿಸಿಲ್ಲ. ಬದಲಾಗಿ ಗಂಭೀರ ಹಾಗೂ ಚಿಂತಾಜನಕ ಸ್ಥಿತಿಯಲ್ಲಿರುವ ಕೋವಿಡ್ ರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆ ನೀಡುವಲ್ಲಿ ಕೂಡ ಗಮನ ಹರಿಸಿತು. ಇದರಿಂದ ಜೀವಗಳು ಉಳಿದವು ಹಾಗೂ ಸಾವಿನ ಸಂಖ್ಯೆ ಕಡಿಮೆಯಾಯಿತು ಎಂದು ಅದು ಹೇಳಿದೆ. ಕೇಂದ್ರ, ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಸಹಭಾಗಿತ್ವದ ಪ್ರಯತ್ನದ ಪರಿಣಾಮ ದೇಶಾದ್ಯಂತ ಆರೋಗ್ಯ ಸೌಲಭ್ಯಗಳು ಸಶಕ್ತಗೊಂಡವು ಎಂದು ಸಚಿವಾಲಯ ತಿಳಿಸಿದೆ.
‘‘ಪ್ರತಿ 10 ಲಕ್ಷ ಜನಸಂಖ್ಯೆ (109)ಗೆ ಅತಿ ಕಡಿಮೆ ಸಾವು ಸಂಭವಿಸಿದ ದೇಶಗಳಲ್ಲಿ ಭಾರತ ಕೂಡ ಒಂದು. ರಶ್ಯಾ, ಜರ್ಮನಿ, ಬ್ರೆಝಿಲ್, ಫ್ರಾನ್ಸ್, ಅಮೆರಿಕ, ಬ್ರಿಟನ್ ಹಾಗೂ ಇಟಲಿಯಂತಹ ದೇಶಗಳಲ್ಲಿ ಪ್ರತಿ 10 ಲಕ್ಷ ಜನಸಂಖ್ಯೆಯಲ್ಲಿ ಅತಿ ಹೆಚ್ಚು ಸಾವು ಸಂಭವಿಸಿದೆ’’ ಎಂದು ಅದು ಹೇಳಿದೆ. ದೇಶದಲ್ಲಿ ಗುಣಮುಖವಾದ ಪ್ರಕರಣಗಳ ಒಟ್ಟು ಸಂಖ್ಯೆ 10,075,950ಕ್ಕೆ ಏರಿಕೆಯಾಗಿದೆ ಹಾಗೂ ರಾಷ್ಟ್ರೀಯ ಚೇತರಿಕೆ ಪ್ರಮಾಣ ಶೇ. 96.42ಕ್ಕೆ ಏರಿಕೆಯಾಗಿದೆ. ಭಾರತದಲ್ಲಿ ಪ್ರಸ್ತುತ ಸಕ್ರಿಯ ಪ್ರಕರಣಗಳ ಸಂಖ್ಯೆ 2,23,335 ಇದೆ. ಇದು ಒಟ್ಟು ಪ್ರಕರಣಗಳ ಶೇ. 2.14. ಕಳೆದ 24 ಗಂಟೆಗಳಲ್ಲಿ 19,299 ರೋಗಿಗಳು ಚೇತರಿಕೆಯಾಗಿದ್ದಾರೆ. ಇದರಿಂದ ಒಟ್ಟು ಸಕ್ರಿಯ ಪ್ರಕರಣಗಳಲ್ಲಿ 855 ಇಳಿಕೆಯಾಗಿದೆ.







