ಭೀಮಾ ಕೋರೆಗಾಂವ್ ವಿಜಯೋತ್ಸವಕ್ಕೆ ಅನುಮತಿ ನಿರಾಕರಣೆ ಹಿಂದೆ ಆರೆಸ್ಸೆಸ್ ಪಿತೂರಿ: ದಲಿತ ಸಂಘಟನೆಗಳ ಮುಖಂಡರು
ಮೈಸೂರು,ಜ.10: ಭೀಮಾ ಕೋರೆಗಾಂವ್ ವಿಜಯೋತ್ಸವದ ಮೆರವಣಿಗೆಗೆ ಅನುಮತಿ ನಿರಾಕರಣೆ ಮಾಡಿರುವುದರ ಹಿಂದೆ ಆರೆಸ್ಸೆಸ್ ಪಿತೂರಿ ಅಡಗಿದೆ ಎಂದು ದಲಿತ ಸಂಘಟನೆಗಳ ಮುಖಂಡರು ಆರೋಪಿಸಿದರು.
ನಂಜನಗೂಡಿನಲ್ಲಿ ರವಿವಾರ ಆಯೋಜಿಸಿದ್ದ ಭೀಮಾ ಕೋರೆಗಾಂವ್ ವಿಜಯೋತ್ಸವದ ಅಂಗವಾಗಿ ಜೂನಿಯರ್ ಕಾಲೇಜು ಮೈದಾನದಿಂದ ಅಂಬೇಡ್ಕರ್ ಭವನದವರೆಗೆ ಕೋರೆಗಾಂವ್ ಸ್ಥೂಪದ ಸ್ವಾಭಿಮಾನಿ ರಥದ ಮೆರವಣಿಗೆ ಆಯೋಜಿಸಲಾಗಿತ್ತು. ಆದರೆ ತಾಲೂಕು ಆಡಳಿತ ಮತ್ತು ಪೊಲೀಸರು ಮೆರವಣಿಗೆಗೆ ಅನುಮತಿ ನಿರಾಕರಿಸಿರುವುದರ ಬಗ್ಗೆ ಕೆಂಡಮಂಡಲರಾದ ದಲಿತ ಮುಖಂಡರುಗಳು 'ವಾರ್ತಾಭಾರತಿ'ಯೊಂದಿಗೆ ಮಾತನಾಡಿದರು.
ಕೋವಿಡ್ ಕಾರಣ ಒಡ್ಡಿ ದಲಿತರ ಸ್ವಾಭಿಮಾನಿ ಮೆರವಣಿಗೆಗೆ ಅನುಮತಿ ನಿರಾಕರಣೆ ಮಾಡಲಾಗಿದೆ. ಗ್ರಾ.ಪಂ.ಚುನಾವಣೆಯಲ್ಲಿ 50 ಸಾವಿರ ಮಂದಿ ಸೇರಿದ್ದರೂ, ಹನುಮ ಜಯಂತಿ ಹೆಸರಿನಲ್ಲಿ ನಡೆಯುವ ಕಾರ್ಯಕ್ರಮಗಳಿಗೆ ಕೋವಿಡ್ ಅಡ್ಡಿಯಾಗುವುದಿಲ್ಲ. ಅದರೆ ದಲಿತರು ಏರ್ಪಡಿಸುವ ಕಾರ್ಯಕ್ರಮಗಳಿಗೆ ಕೋವಿಡ್ ಅಡ್ಡಿಯಾಗುತ್ತದೆ ಎಂದು ದಲಿತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಚುಂಚನಹಳ್ಳೀ ಮಲ್ಲೇಶ್ ಆರೋಪಿಸಿದರು.
ನಮ್ಮ ಸಂಘಟನೆಯ ಆಯೋಜಿಸಿರುವ ಕಾರ್ಯಕ್ರಮವನ್ನು ಹತ್ತಿಕ್ಕಲು ಆರೆಸ್ಸೆಸ್ ಪಿತೂರಿ ಮಾಡಿದೆ. ಹಾಗಾಗಿಯೇ ನಮಗೆ ಅನುಮತಿ ನಿರಾಕರಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ದಲಿತ ಸಂಘಟನೆಗಳ ಮುಖಡರುಗಳಾದ ಮಲ್ಲಹಳ್ಳಿ ನಾರಾಯಣ್, ಅಭಿನಾಗಭೂಷಣ್, ಸುರೇಶ್ ಶಂಕರಪುರ, ನಗರ್ಲೆ ವಿಜಯಕುಮಾರ್ ಕೂಡಾ ಮಾತನಾಡಿ ಅನುಮತಿ ನಿರಾಕರಣೆಗೆ ಅಸಮಾಧಾನ ವ್ಯಕ್ತಪಡಿಸಿದರು.







