ಟ್ರಂಪ್ ಟ್ವಿಟರ್ ಖಾತೆ ವಜಾ ನಿರ್ಧಾರದ ಹಿಂದೆ ಪ್ರಮುಖ ಪಾತ್ರ ವಹಿಸಿದ್ದ ಭಾರತೀಯ-ಅಮೆರಿಕನ್ ವಿಜಯಾ ಗದ್ದೆ

photo: twitter
ವಾಷಿಂಗ್ಟನ್,ಜ.11: ಅಮೆರಿಕಾದ ನಿರ್ಗಮನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಟ್ವಿಟ್ಟರ್ ಖಾತೆಯನ್ನು ಖಾಯಂ ಆಗಿ ಸ್ಥಗಿತಗೊಳಿಸುವ ನಿರ್ಧಾರದ ಹಿಂದೆ ಪ್ರಮುಖ ಪಾತ್ರ ವಹಿಸಿದವರು ಭಾರತೀಯ ಮೂಲದ ಮಹಿಳೆ ಹಾಗೂ ಟ್ವಿಟ್ಟರ್ ನ ಪ್ರಮುಖ ವಕೀಲೆಯಾಗಿರುವ ವಿಜಯಾ ಗದ್ದೆ ಎಂದು ndtv.com ತನ್ನ ವರದಿಯಲ್ಲಿ ತಿಳಿಸಿದೆ.
ಅಮೆರಿಕಾದ ಸಂಸತ್ ಕಟ್ಟಡ ಕ್ಯಾಪಿಟೊಲ್ ಹಿಲ್ ಮೇಲೆ ಟ್ರಂಪ್ ಬೆಂಬಲಿಗರು ನಡೆಸಿದ ದಾಂಧಲೆಯ ಬೆನ್ನಲ್ಲೇ ಟ್ರಂಪ್ ಟ್ವಿಟ್ಟರ್ ಖಾತೆ ರದ್ದುಗೊಂಡಿತ್ತು.
ಟ್ವಿಟರ್ ನ ಲೀಗಲ್ ಪಾಲಿಸಿ ಎಂಡ್ ಟ್ರಸ್ಟ್ ಆಂಡ್ ಸೇಫ್ಟಿ ಇಶ್ಯೂಸ್ ಮುಖ್ಯಸ್ಥೆಯಾಗಿರುವ ವಿಜಯಾ ಗದ್ದೆ ಅವರು ಜನವರಿ 8ರಂದು ಮಾಡಿದ್ದ ಟ್ವೀಟ್ನಲ್ಲಿ ಹೀಗೆ ಬರೆದಿದ್ದರು- "ಮುಂದೆಯೂ ಹಿಂಸೆಯ ಅಪಾಯ ಹೆಚ್ಚಿರುವ ಹಿನ್ನೆಲೆಯಲ್ಲಿ ಟ್ರಂಪ್ ಅವರ ಟ್ವಿಟ್ಟರ್ ಖಾತೆ ಖಾಯಂ ರದ್ದುಗೊಳಿಸಲಾಗಿದೆ. ನಮ್ಮ ಪಾಲಿಸಿ ಎಂಡೋರ್ಸ್ಮೆಂಟ್ ವಿಶ್ಲೇಷಣೆಯನ್ನೂ ಪ್ರಕಟಿಸಿದ್ದೇವೆ. ನಮ್ಮ ನಿರ್ಧಾರದ ಬಗ್ಗೆ ಇನ್ನಷ್ಟು ವಿವರಗಳನ್ನು ಇಲ್ಲಿ ಓದಬಹುದು" ಎಂದು ಬರೆದು ಒಂದು ಲಿಂಕ್ ನೀಡಿದ್ದರು.
ಭಾರತದಲ್ಲಿ ಜನಿಸಿದ್ದ ವಿಜಯಾ ಗದ್ದೆ ಅವರು ಸಣ್ಣವರಿರುವಾಗಲೇ ಅವರ ಕುಟುಂಬ ಅಮೆರಿಕಾಗೆ ವಲಸೆ ಹೋಗಿತ್ತು. ಅವರ ತಂದೆ ಗಲ್ಫ್ ಆಫ್ ಮೆಕ್ಸಿಕೋದಲ್ಲಿರುವ ತೈಲ ಸಂಸ್ಕರಣಾಗಾರದಲ್ಲಿ ಕೆಮಿಕಲ್ ಇಂಜಿನಿಯರ್ ಆಗಿದ್ದರಿಂದ ವಿಜಯಾ ಅವರು ಟೆಕ್ಸಾಸ್ನಲ್ಲಿ ತಮ್ಮ ಬಾಲ್ಯ ಕಳೆದಿದ್ದರು. ನ್ಯೂಜೆರ್ಸಿಯ ಶಾಲೆಯಲ್ಲಿ ಹೈಸ್ಕೂಲ್ ಶಿಕ್ಷಣ ಪಡೆದ ಅವರು ಕಾರ್ನ್ವೆಲ್ ವಿವಿಯಲ್ಲಿ ಪದವಿ ಶಿಕ್ಷಣ ಪಡೆದು ಮುಂಧೆ ನ್ಯೂಯಾರ್ಕ್ ಯುನಿವರ್ಸಿಟಿ ಲಾ ಸ್ಕೂಲ್ನಲ್ಲಿ ಕಾನೂನು ಶಿಕ್ಷಣ ಪಡೆದಿದ್ದಾರೆ. ಸುಮಾರು ಒಂದು ದಶಕ ಕಾನೂನು ಸಂಸ್ಥೆಯೊಂದರಲ್ಲಿ ಕೆಲಸ ಮಾಡಿದ ಅವರು 2011ರಲ್ಲಿ ಟ್ವಿಟ್ಟರ್ ಸೇವೆಗೆ ಸೇರ್ಪಡೆಗೊಂಡಿದ್ದರು.
ಇನ್ ಸ್ಟೈಲ್ ಮ್ಯಾಗಜೀನ್ ವಿಜಯಾ ಅವರನ್ನು "ದಿ ಬದಾಸ್ 50 2020 : ಮೀಟ್ ದಿ ವಿಮೆನ್ ಹೂ ಆರ್ ಚೇಂಜಿಂಗ್ ದಿ ವರ್ಲ್ಡ್" ಪಟ್ಟಿಯಲ್ಲಿ ಸೇರಿಸಿತು. ವಿಜಯಾ ಅವರು ಸ್ಟಾರ್ಟ್-ಅಪ್ಗಳಿಗೆ ಸಹಾಯ ಮಾಡುವ ಏಂಜೆಲ್ಸ್ ಸಂಸ್ಥೆಯ ಸಹ-ಸ್ಥಾಪಕಿಯೂ ಆಗಿದ್ದಾರೆ.







