ಆತ್ಮ ನಿರ್ಭರ ಯೋಜನೆ ದೇಶದ ಆರ್ಥಿಕ ಶಕ್ತಿ ವೃದ್ಧಿಗೆ ಪೂರಕ: ಸತೀಶ್ ಕಾಶಿನಾಥ್ ಮರಾಠೆ

ಮಂಗಳೂರು, ಜ.11: ಆತ್ಮ ನಿರ್ಭರ ಯೋಜನೆಯು ದೇಶದ ಆರ್ಥಿಕ ಶಕ್ತಿ ವೃದ್ಧಿಗೆ ಪೂರಕವಾಗಲಿದೆ. ಸಹಕಾರ ಸಂಸ್ಥೆಗಳ ಮೂಲಕ ಕೃಷಿ, ಗ್ರಾಮೀಣ ವಲಯ, ಉತ್ಪಾದನಾ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆ ಆಗಲಿದೆ. ಆರೋಗ್ಯಕರ ಮತ್ತು ನಿಯಂತ್ರಿತ ಬೆಳವಣಿಗೆಯೊಂದಿಗೆ ದೇಶದ ಆರ್ಥಿಕತೆ ಬಲಗೊಳ್ಳಲಿದೆ. ಮುಂದಿನ 5 ವರ್ಷದೊಳಗೆ ಭಾರತ ಬಲಾಢ್ಯ ಆರ್ಥಿಕ ಶಕ್ತಿಯಾಗಿ ರೂಪುಗೊಳ್ಳಲಿದೆ ಎಂದು ಸಹಕಾರ ಭಾರತಿ ಮಾರ್ಗದರ್ಶಕ, ಭಾರತೀಯ ರಿಸರ್ವ್ ಬ್ಯಾಂಕ್‌ನ ನಿರ್ದೇಶಕ ಸತೀಶ್ ಕಾಶಿನಾಥ್ ಮರಾಠೆ ಹೇಳಿದರು.
ಸಹಕಾರ ಭಾರತಿ ಮಂಗಳೂರು ಇದರ ವತಿಯಿಂದ ಸಹಕಾರ ಭಾರತಿ ಸ್ಥಾಪನಾ ದಿನಾಚರಣೆ ಅಂಗವಾಗಿ ನಗರದ ರಥಬೀದಿಯ ವಿಶ್ವಕರ್ಮ ಬ್ಯಾಂಕ್ ಸಭಾಂಗಣದಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ‘ಸಹಕಾರದ ಮೂಲಕ ಆತ್ಮನಿರ್ಭರ ಭಾರತ’ ಎಂಬ ವಿಷಯದ ಬಗ್ಗೆ ಅವರು ಉಪನ್ಯಾಸ ನೀಡಿದರು.
ವಿದೇಶಗಳಲ್ಲಿ ನೀರು, ವಿದ್ಯುತ್ ಪೂರೈಕೆ, ಆರೋಗ್ಯ ಮುಂತಾದ ಸೇವಾ ವಲಯಗಳನ್ನು ಸಹಕಾರಿ ಸಂಸ್ಥೆಗಳು ನಿರ್ವಹಿಸುತ್ತಿವೆ. ಸಹಕಾರದಲ್ಲಿ ಸೇವೆಯ ಉದ್ದೇಶವಿದೆಯೇ ಹೊರತು ಲಾಭದ ದೃಷ್ಟಿಕೋನವಿಲ್ಲ. ಸಹಕಾರಿ ಬ್ಯಾಂಕ್‌ಗಳು ದೇಶದಲ್ಲಿ ಉತ್ತಮ ವಾಗಿ ಕಾರ್ಯನಿರ್ವಹಿಸುತ್ತಿದ್ದು, ಅವುಗಳನ್ನು ಬಲಗೊಳಿಸಬೇಕು. ಸಹಕಾರ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಎಲ್ಲ ರಾಜ್ಯ ಸರಕಾರ ಗಳು ವಿಷನ್ ಡಾಕ್ಯುಮೆಂಟ್ ರೂಪಿಸಬೇಕು ಎಂದು ಸತೀಶ್ ಕಾಶಿನಾಥ್ ಮರಾಠೆ ಆಗ್ರಹಿಸಿದರು.
ದೇಶದಲ್ಲಿ ಆಹಾರ ಉತ್ಪಾದನೆ ಅಗತ್ಯಕ್ಕಿಂತ ಹೆಚ್ಚೇ ಇದೆ. ಆದರೆ ಸಂಸ್ಕರಣೆ ಮಾಡದ ಕಾರಣ ನಷ್ಟವಾಗಿ ಹೋಗುತ್ತಿದೆ. ವಿದೇಶದಲ್ಲಿ ಶೇ.80ರಷ್ಟು ಆಹಾರ ಉತ್ಪನ್ನಗಳು ಸಂಸ್ಕರಣೆಗೊಂಡರೆ, ನಮ್ಮಲ್ಲಿ ಈ ಪ್ರಮಾಣ ಶೇ. 20 ಮಾತ್ರ ಸಂರಕ್ಷಣೆ ಯಾಗುತ್ತಿದೆ. ಹಣ್ಣು, ತರಕಾರಿ, ಎಣ್ಣೆಬೀಜಗಳ ಸಂಸ್ಕರಣೆ ಮೂಲಕ ಕೃಷಿ ಕ್ಷೇತ್ರದ ಆದಾಯವನ್ನು ದ್ವಿಗುಣಗೊಳಿಸಬಹುದು ಎಂದ ಅವರು ನೋಟು ಅಪವೌಲ್ಯ, ಜಿಎಸ್‌ಟಿ, ರೇರಾ ಕಾಯ್ದೆ ಜಾರಿಯಿಂದ ತಕ್ಷಣಕ್ಕೆ ಉತ್ತಮ ಪರಿಣಾಮ ದೊರೆಯದಿದ್ದರೂ, ದೀರ್ಘಾ ವಧಿಯಲ್ಲಿ ಇವು ಆರ್ಥಿಕ ಸ್ಥಿತಿಯ ಮೇಲೆ ಉತ್ತಮ ಪರಿಣಾಮ ಬೀರಲಿವೆ. ಲಾಕ್‌ಡೌನ್ ತೆರವು ಬಳಿಕ ಜಿಎಸ್‌ಟಿ ಸಂಗ್ರಹ ಸಹಜ ಸ್ಥಿತಿಗೆ ಮರಳುತ್ತಿದೆ ಎಂದರು.
ಸಹಕಾರ ಭಾರತಿ ರಾಜ್ಯಾಧ್ಯಕ್ಷ ಎಸ್.ಆರ್. ಸತೀಶ್ಚಂದ್ರ ಅಧ್ಯಕ್ಷತೆ ವಹಿಸಿದ್ದರು. ಸಹಕಾರ ಸಂಘಗಳ ದ.ಕ. ಜಿಲ್ಲಾ ಉಪ ನಿಬಂಧಕ ಪ್ರವೀಣ್ ಬಿ. ನಾಯಕ್, ಹಿರಿಯ ಲೆಕ್ಕಪರಿಶೋಧಕ ಪ್ರಸನ್ನ ಶೆಣೈ ಅತಿಥಿಗಳಾಗಿದ್ದರು. ಸಹಕಾರ ಭಾರತಿ ರಾಜ್ಯ ಕಾರ್ಯದರ್ಶಿ ಹರೀಶ್ ಆಚಾರ್, ಸಹಕಾರ ಭಾರತಿಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಣೇಶ್ ಶೆಣೈ ಮರೋಳಿ ಉಪಸ್ಥಿತರಿದ್ದರು.
ಜಿಲ್ಲಾಧ್ಯಕ್ಷ ಚಿತ್ತರಂಜನ್ ಬೋಳಾರ್ ಸ್ವಾಗತಿಸಿದರು.









