ದೇಶದ್ರೋಹ ಪ್ರಕರಣ: ಕಂಗನಾ ಬಂಧನಕ್ಕೆ ಮಧ್ಯಂತರ ತಡೆ ವಿಸ್ತರಿಸಿದ ಬಾಂಬೆ ಹೈಕೋರ್ಟ್

ಮುಂಬೈ: ಬಾಲಿವುಡ್ ನಟಿ ಕಂಗನಾ ರಣಾವತ್ ಹಾಗೂ ಅವರ ಸಹೋದರಿ ರಂಗೋಲಿ ಚಾಂದೇಲ್ ಅವರ ಬಂಧನ ವಿರುದ್ದ ನೀಡಿದ್ದ ಮಧ್ಯಂತರ ತಡೆಯನ್ನು ಸೋಮವಾರ ಬಾಂಬೆ ಹೈಕೋರ್ಟ್ ಜನವರಿ 25ರ ತನಕ ವಿಸ್ತರಿಸಿದೆ.
ಅಲ್ಲದೆ ಈ ಅವಧಿಯಲ್ಲಿ ವಿಚಾರಣೆಗಾಗಿ ಕಂಗನಾ, ಆಕೆಯ ಸಹೋದರಿಗೆ ಸಮನ್ಸ್ ನೀಡದಂತೆಯೂ ನಗರ ಪೊಲೀಸರಿಗೆ ಬಾಂಬೆ ಹೈಕೋರ್ಟ್ ನಿರ್ದೇಶನ ನೀಡಿದೆ.
ಮುಂಬೈ ಪೊಲೀಸರು ಕಂಗನಾ ಹಾಗೂ ಅವರ ಸಹೋದರಿ ರಂಗೋಲಿ ವಿರುದ್ದ ದೇಶದ್ರೋಹ ಆರೋಪದಡಿ ಎಫ್ ಐಆರ್ ದಾಖಲಿಸಿದ್ದರು. ಈ ಸಂಬಂಧ ಹೈಕೋರ್ಟ್ ಮೆಟ್ಟಿಲೇರಿದ್ದ ಕಂಗನಾಗೆ ಹೈಕೋರ್ಟ್ ಬಂಧನದಿಂದ ರಕ್ಷಣೆ ನೀಡಿತ್ತು. ಜನವರಿ 8ರಂದು ಕಂಗನಾ ಹಾಗೂ ಅವರ ಸಹೋದರಿ ಮುಂಬೈನ ಬಾಂದ್ರಾ ಪೊಲೀಸರ ಮುಂದೆ ಹೇಳಿಕೆ ದಾಖಲಿಸಿದ್ದರು.
ಸಾಮಾಜಿಕ ಜಾಲತಾಣದಲ್ಲಿ ದ್ವೇಷ ಹಾಗೂ ಕೋಮು ಪ್ರಚೋದನಕಾರಿ ಪೋಸ್ಟ್ ಗಳನ್ನು ಹಂಚಿಕೊಂಡಿದ್ದಾರೆ ಎಂಬ ಆರೋಪದಡಿ ಎಫ್ ಐಆರ್ ದಾಖಲಿಸುವಂತೆ ಬಾಂದ್ರಾ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಆದೇಶ ಹೊರಡಿಸಿತ್ತು. ಈ ಎಫ್ ಐಆರ್ ರದ್ದುಪಡಿಸುವಂತೆ ಕೋರಿ ಕಂಗನಾ ಹಾಗೂ ಅವರ ಸಹೋದರಿ ಬಾಂಬೆ ಹೈಕೋರ್ಟಿನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ನ್ಯಾಯಮೂರ್ತಿ ಎಸ್.ಎಸ್. ಶಿಂಧೆ, ಮನೀಷ್ ಪಿತಾಲೆ ಅವರ ವಿಭಾಗೀಯ ಪೀಠ ಅರ್ಜಿ ವಿಚಾರಣೆ ನಡೆಸುತ್ತಿದೆ.





