ಗ್ರಾ.ಪಂ. ಚುನಾವಣೆಯಲ್ಲಿ ಮತದಾರರ ತೀರ್ಪಿನಿಂದ ಕಾಂಗ್ರೆಸ್ ನವರು ಕಂಗಲಾಗಿದ್ದಾರೆ: ನಳಿಲ್ ಕುಮಾರ್

ಚಾಮರಾಜನಗರ, ಜ.11: ನಮ್ಮ ಭದ್ರಕೋಟೆ ಎಂದು ಬೀಗುತ್ತಿದ್ದ ಕಾಂಗ್ರೆಸ್ ನವರು ಈ ಬಾರಿ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಮತದಾರರು ನೀಡಿದ ತೀರ್ಪಿನಿಂದ ಕಂಗಲಾಗಿದ್ದಾರೆ. ಚಾಮರಾಜನಗರ ಜಿಲ್ಲೆ ಕಾಂಗ್ರೆಸ್ ಮುಕ್ತವಾಗುತ್ತಿದೆ ಎಂದು ರಾಜ್ಯ ಬಿಜೆಪಿ ರಾಜ್ಯಾಧ್ಯಕ್ಷ ನಳಿಲ್ ಕುಮಾರ್ ಕಟೀಲು ಹೇಳಿದರು.
ಅವರು ಚಾಮರಾಜನಗರದಲ್ಲಿ ನಡೆದ ಜನಸೇವಕ ಸಮಾವೇಶದಲ್ಲಿ ಮಾತನಾಡುತ್ತಾ, ಚಾಮರಾಜನಗರ ಜಿಲ್ಲೆಯಲ್ಲಿ ಬಿಜೆಪಿ ಬೆಂಬಲಿತ ಸಾವಿರಕ್ಕೂ ಹೆಚ್ಚು ಗ್ರಾಮ ಪಂಚಾಯತ್ ಸದಸ್ಯರು ಚುನಾಯಿತರಾಗುವ ಮೂಲಕ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಚಾಮರಾಜನಗರ ಜಿಲ್ಲೆಯ ನಾಲ್ಕು ವಿಧಾನ ಸಭಾ ಕ್ಷೇತ್ರಗಳಲ್ಲೂ ಬಿಜೆಪಿ ಅಭ್ಯರ್ಥಿ ಆಯ್ಕೆಯಾಗುವುದರಲ್ಲಿ ಸಂದೇಹವಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಜನಾದೇಶ ಬಿಜೆಪಿಯತ್ತ ಸಾಗುತ್ತಿದೆ. ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರಗಳಿವೆ. ಅಭಿವೃದ್ದಿಯತ್ತ ದೇಶ ಮುನ್ನುಗ್ಗುತ್ತಿದೆ ಎಂದು ಹೇಳಿದ ನಳಿಲ್ ಕುಮಾರ್ ಕಟೀಲ್, ಜಿಲ್ಲೆಯಲ್ಲಿನ ಉಸ್ತುವಾರಿ ಸಚಿವರಾಗಿರುವ ಸುರೇಶ್‌ಕುಮಾರ್ ಉತ್ತಮ ಕೆಲಸ ಮಾಡುವ ಮೂಲಕ ಪಕ್ಷನ್ನು ಸಧೃಡವಾಗಿ ಕಟ್ಟಿದ್ದಾರೆ ಎಂದು ಹೇಳಿದರು.
ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಸುರೇಶ್ ಕುಮಾರ್, ಮೈಸೂರು- ಕೊಡಗು ಸಂಸದ ಪ್ರತಾಪ್ ಸಿಂಹ, ಗುಂಡ್ಲುಪೇಟೆ ಶಾಸಕ ಸಿ.ಎಸ್. ನಿರಂಜನ್ ಕುಮಾರ್, ಮಾಜಿ ಶಾಸಕ ಜಿ.ಎನ್. ನಂಜುಂಡಸ್ವಾಮಿ, ಪರಿಮಳನಾಗಪ್ಪ, ಜಿಲ್ಲಾಧ್ಯಕ್ಷ ಆರ್.ಸುಂದರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಇದೇ ವೇಳೆ ನೂತನವಾಗಿ ಆಯ್ಕೆಯಾದ ಗ್ರಾಮ ಪಂಚಾಯತ್ ಸದಸ್ಯರಿಗೆ ಗೌರವ ಸಲ್ಲಿಸಲಾಯಿತು.







