ಪುಡಾದಿಂದ ಕಾಲ ಮಿತಿಯೊಳಗೆ ಅಭಿವೃದ್ಧಿಯ ಮಹಾಯೋಜನೆ ಸಿದ್ಧ: ಶಾಸಕ ಮಠಂದೂರು
ನಗರಾಭಿವೃದ್ಧಿಯ ಕುರಿತು ಸಮಾಲೋಚನಾ ಸಭೆ

ಪುತ್ತೂರು: ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪುತ್ತೂರು ನಗರಸಭೆಯಾಗಿದೆ. ವಿಟ್ಲ ಪಟ್ಟಣ ಪಂಚಾಯತ್ ಆಗಿದೆ. ಮುಂದೆ ಉಪ್ಪಿನಂಗಡಿ ಪಟ್ಟಣ ಪಂಚಾಯತ್ ಆಗಲಿದೆ. ಈ ಮೂರು ನಗರಗಳು ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಇರುವುದರಿಂದ ಪುತ್ತೂರಿನ ಸಮಗ್ರ ಅಭಿವೃದ್ಧಿಗೆ ಮಹಾಯೋಜನೆ ಅಗತ್ಯವಿದ್ದು ಪುತ್ತೂರು ಪುಡಾದಿಂದ ಕಾಲಮಿತಿಯೊಳಗೆ ಮಹಾ ಯೋಜನೆಯನ್ನು ಸಿದ್ಧಪಡಿಸಲಾಗುವುದು ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.
ಅವರು ಸೋಮವಾರ ಪುತ್ತೂರು ಪುಡಾದ ಸಭಾ ಭವನದಲ್ಲಿ ಪುತ್ತೂರು ಎಸೋಸಿಯೇಶನ್ ಆಫ್ ಸಿವಿಲ್ ಇಂಜಿನಿಯರ್ಸ್ ಸಂಸ್ಥೆಯ ಸದಸ್ಯರೊಂದಿಗೆ ನಗರಾಭಿವೃದ್ಧಿಯ ಕುರಿತಂತೆ ಸಮಾಲೋಚನಾ ಸಭೆ ನಡೆಸಿದರು. ಮಹಾ ಯೋಜನೆಯೊಂದೇ ಭವಿಷ್ಯತ್ ಪುತ್ತೂರು ವಿಧಾನಸಭಾ ಕ್ಷೇತ್ರದ ಯೋಜನಾಬದ್ಧ ಬೆಳವಣಿಗೆಗೆ ಸಹಕಾರಿಯಾಗಲಿದ್ದು, ಈ ನಿಟ್ಟಿನಲ್ಲಿ ಸಾರ್ವಜನಿಕರ, ಇಂಜಿನಿಯರ್‌ಗಳ, ವರ್ತಕರ ವಿವಿಧ ಸಂಘಟನೆಗಳೊಂದಿಗೆ ಚರ್ಚಿಸಿ ಮಹಾಯೋಜನೆಯನ್ನು ಸಿದ್ಧ ಪಡಿಸಲಾಗುವುದು.
ಪುತ್ತೂರು ನಗರಕ್ಕೆ ಒಳ ಚರಂಡಿ ಯೋಜನೆಯನ್ನು ಜಾರಿಗೊಳಿಸುವುದು ಕೂಡಾ ವರ್ತಮಾನದ ಅವಶ್ಯಕತೆಯಾಗಿದೆ ಎಂದು ತಿಳಿಸಿದರು. ಪುತ್ತೂರು ನಗರದಲ್ಲಿ ವರ್ತುಲ ರಸ್ತೆಗಳ ನಿರ್ಮಾಣ ಅಗತ್ಯವಿದ್ದು ಇದಕ್ಕಾಗಿ ಪುಡಾದಿಂದ ಅಭಿವೃದ್ಧಿ ಶುಲ್ಕ ಸಂಗ್ರಹಿಸಲಾಗುತ್ತದೆ. ಈ ಮೊತ್ತವನ್ನು ಭೂಸ್ವಾಧೀನತೆಗೆ ಬಳಸಿಕೊಳ್ಳಲಾಗುತ್ತದೆ ಎಂದು ಪುತ್ತೂರು ಪುಡಾ ಅಧ್ಯಕ್ಷ ಭಾಮಿ ಅಶೋಕ್ ಶೆಣೈ ಹೇಳಿದರು. ಪುಡಾದ ಅಧಿಕಾರ ವ್ಯಾಪ್ತಿಯಲ್ಲಿ ಜನಪಯೋಗಿಯಾಗಿ ಕೆಲಸ ಮಾಡಲಾಗುವುದು. ಅಲ್ಲದೇ ತಜ್ಞರ ಸಲಹೆ ಪಡೆದು ನಿಯಮಾವಳಿಗಳ ಅನುಷ್ಟಾನ ಮಾಡಲಾಗುವುದು ಎಂದರು. ಪುತ್ತೂರು ನಗರಸಭಾ ವ್ಯಾಪ್ತಿಯಲ್ಲಿ ಕಟ್ ಕನ್ವರ್ಷನ್ ಸಮಸ್ಯೆ ಇದೆ. ಈ ಸಮಸ್ಯೆ ದ.ಕ. ಮತ್ತು ಉಡುಪಿಯಲ್ಲಿ ಮಾತ್ರ ಇದೆ. ಇದನ್ನು ಕಂದಾಯ ಸಚಿವರೊಂದಿಗೆ ಮತ್ತು ನಗರಾಭಿವೃದ್ಧಿ ಸಚಿವರೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುತ್ತದೆ. ಅದೇ ರೀತಿ ಕಟ್ಟಡ ನಿರ್ಮಾಣ ಸಂದರ್ಭದ ಸೆಟ್‌ಬ್ಯಾಕ್ ಸಮಸ್ಯೆಯನ್ನು ಕೂಡಾ ನಿಯಮಾವಳಿ ರೂಪಿಸುವುದರೊಂದಿಗೆ ಪರಿಹರಿಸಲಾಗುವುದು ಎಂದು ಶಾಸಕರು ಪೇಸ್ ಸದಸ್ಯರಿಗೆ ಭರವಸೆ ನೀಡಿದರು.
ಸಭೆಯಲ್ಲಿ ಪೇಸ್ ಗೌರವಾಧ್ಯಕ್ಷ ಎಸ್.ಕೆ. ಆನಂದ್, ಪಿ. ರವೀಂದ್ರ, ಪಿ.ಜಿ. ಜಗನ್ನಿವಾಸ್ ರಾವ್, ವಸಂತ ಭಟ್, ಶಂಕರ್ ಭಟ್, ಪುತ್ತೂರು ನಗರಸಭಾ ಪೌರಾಯುಕ್ತೆ ರೂಪಾ ಟಿ. ಶೆಟ್ಟಿ, ಪುತ್ತೂರು ಪುಡಾ ಸದಸ್ಯರಾದ ಪಿ. ವಾಮನ ಪೈ, ಜಯಶ್ರೀ ಎಸ್. ಶೆಟ್ಟಿ, ರಮೇಶ್ ಭಟ್ ಉಪಸ್ಥಿತರಿದ್ದರು. ಪುತ್ತೂರು ಪುಡಾದ ಸದಸ್ಯ ಕಾರ್ಯದರ್ಶಿ ಅಭಿಲಾಷ್ ಸ್ವಾಗತಿಸಿ, ವಂದಿಸಿದರು.







