ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನ: ಕೆಎಸ್ಸಾರ್ಟಿಸಿ ಬಸ್ಸು ನಿರ್ವಾಹಕ ಆಸ್ಪತ್ರೆಗೆ ದಾಖಲು
ಪುತ್ತೂರು: ಕೆಎಸ್ಸಾರ್ಟಿಸಿ ಬಿಸಿರೋಡು ಘಟಕದ ನಿರ್ವಾಹಕರೊಬ್ಬರು ತನಗೆ ಕಿರುಕುಳ ನೀಡಲಾಗುತ್ತಿದೆ ಎಂದು ದೂರು ನೀಡಲು ಪುತ್ತೂರು ಕೆಎಸ್ಸಾರ್ಟಿಸಿ ವಿಭಾಗ ನಿಯಂತ್ರಣಾಧಿಕಾರಿಗಳ ಕಚೇರಿಗೆ ವಿಷ ಸೇವನೆ ಮಾಡಿ ಆಗಮಿಸಿ ದೂರು ನೀಡುವ ಸಂದರ್ಭದಲ್ಲಿಯೇ ಕುಸಿದು ಬಿದ್ದು ಅಸ್ವಸ್ಥಗೊಂಡ ಘಟನೆ ಸೋಮವಾರ ನಡೆದಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಕೆಎಸ್ಸಾರ್ಟಿಸಿ ಬಿ.ಸಿ. ರೋಡು ಘಟಕದ ಬಸ್ ನಿರ್ವಾಹಕ ನಾಗೇಶ್ (57) ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ. ತನಗೆ ಘಟಕದಲ್ಲಿ ಕರ್ತವ್ಯಕ್ಕೆ ನಿಯೋಜನೆ ಮಾಡಲು ಕಿರುಕುಳ ನೀಡಲಾಗುತ್ತಿದ್ದು ತನಗೆ ನ್ಯಾಯ ಕೊಡಿಸಬೇಕು ಎಂದು ಪುತ್ತೂರು ಕೆಎಸ್‌ಆರ್‌ಟಿಸಿ ವಿಭಾಗ ನಿಯಂತ್ರಣಾಧಿಕಾರಿಗಳ ಬಳಿಗೆ ಸೋಮವಾರ ಬಂದಿದ್ದರು. ಕಚೇರಿಗೆ ಬರುವಾಗಲೇ ವಿಷ ಕುಡಿದು ಬಂದಿದ್ದ ನಾಗೇಶ್ ಕಚೇರಿಯಲ್ಲಿಯೇ ಅಸ್ವಸ್ತಗೊಂಡರು. ತಕ್ಷಣವೇ ಅಸ್ವಸ್ತ ಅವರನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು.
ಚಿಕಿತ್ಸೆಯ ಬಳಿಕ ಅವರು ಆಸ್ಪತ್ರೆಯಲ್ಲಿ ಚೇತರಿಸುತ್ತಿದ್ದು ಅಪಾಯದಿಂದ ಪಾರಾಗಿದ್ದಾರೆ. ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆತ್ಮಹತ್ಯೆಗೆ ಯತ್ನಿಸಿದ ಕೆಎಸ್ಸಾರ್ಟಿಸಿ ಬಸ್ ನಿರ್ವಾಹಕ ನಾಗೇಶ್ ಅವರು ಸೈನೆಡ್ ಕಿಲ್ಲರ್ ಮೋಹನನ ತಮ್ಮನಾಗಿದ್ದು, ಇವರು ಪುತ್ತೂರು ವಿಭಾಗನಿಯಂತ್ರಣಾಧಿಕಾರಿಯವರಿಗೆ ತನ್ನ ಘಟಕದಲ್ಲಿ ತನಗಾಗುತ್ತಿರುವ ಉಪಟಳಗಳ ಕುರಿತು ಈ ಹಿಂದೆ ಯಾವುದೇ ದೂರುಗಳನ್ನು ನೀಡಿರಲಿಲ್ಲ ಎನ್ನಲಾಗಿದೆ. ಸೋಮವಾರ ದೂರು ನೀಡಲು ಬರುವಾಗಲೇ ವಿಷ ಸೇವಿಸಿ ಆಗಮಿಸಿದ್ದರು. ಕಂಡೆಕ್ಟರ್ ನಾಗೇಶ್ ಅವರು ಮೌಖಿಕವಾಗಿ ನೀಡಿದ ದೂರನ್ನು ತನಿಖೆ ಮಾಡಲಾಗುವುದು ಎಂದು ಪುತ್ತೂರು ಕೆಎಸ್ಸಾರ್ಟಿಸಿ ವಿಭಾಗ ನಿಯಂತ್ರಣಾಧಿಕಾರಿ ಜಯಕರ ಶೆಟ್ಟಿ ತಿಳಿಸಿದ್ದಾರೆ.







