ರಾಜ್ಯದಲ್ಲಿ ಮೊದಲ ಹಂತದಲ್ಲಿ 16 ಲಕ್ಷಕ್ಕೂ ಅಧಿಕ ಮಂದಿಗೆ ಕೊರೋನ ಲಸಿಕೆ: ಸಿಎಂ ಯಡಿಯೂರಪ್ಪ

ಬೆಂಗಳೂರು, ಜ. 11: ‘ರಾಜ್ಯದಲ್ಲಿ ಮೊದಲ ಹಂತದಲ್ಲಿ ಜ.16ರ ಶನಿವಾರದಿಂದ 16 ಲಕ್ಷ ಮಂದಿ ಕೊರೋನ ಸೋಂಕು ನಿಯಂತ್ರಣಕ್ಕೆ ಕಾರ್ಯನಿರ್ವಹಿಸುತ್ತಿರುವ ಕೋವಿಡ್-19 ಯೋಧರಿಗೆ ಲಸಿಕೆ ಹಾಕಲಾಗುವುದು' ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಇಂದಿಲ್ಲಿ ಸ್ಪಷ್ಟನೆ ನೀಡಿದ್ದಾರೆ.
ಸೋಮವಾರ ಇಲ್ಲಿನ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಕೋವಿಡ್ ವ್ಯಾಕ್ಸಿನೇಷನ್‍ಗೆ ಸಂಬಂಧಿಸಿದಂತೆ ನಡೆದ ವಿಡಿಯೋ ಸಂವಾದದ ಬಳಿಕ ಮಾತನಾಡಿದ ಅವರು, ಕರ್ನಾಟಕ ರಾಜ್ಯದಲ್ಲಿ 235 ಕೇಂದ್ರಗಳಲ್ಲಿ ಕೋವಿಡ್ ನಿಯಂತ್ರಣ ಲಸಿಕೆ ವಿತರಣೆಗೆ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.
ಲಸಿಕೆ ಶೇಖರಣೆಗೆ ಕೋಲ್ಡ್ ಸ್ಟೋರೇಜ್, ಹಂಚಿಕೆ, ವಿತರಣೆ, ನೀಡುವಿಕೆ ಸೇರಿದಂತೆ ಎಲ್ಲ ವ್ಯವಸ್ಥೆ, ಎಲ್ಲ ಹಂತದಲ್ಲೂ ನಿಗಾವಹಿಸಲಾಗಿದೆ. ಹಂತ-ಹಂತವಾಗಿ ಲಸಿಕೆ ವಿತರಣೆ ಮಾಡಲಿದ್ದು, ಜನರ ಸಹಕಾರ ನೀಡಬೇಕು ಎಂದು ಯಡಿಯೂರಪ್ಪ ಸಾರ್ವಜನಿಕರಲ್ಲಿ ಮನವಿ ಮಾಡಿದರು.
ಕೊರೋನ ಯೋಧರ ಬಳಿಕ ಸಾಮಾನ್ಯ ಜನರಿಗೆ ಲಸಿಕೆ: ಭಾರತೀಯ ಕಂಪೆನಿಗಳು ತಯಾರಿಸಿದ ಕೋವ್ಯಾಕ್ಸಿನ್ ಮತ್ತು ಕೋವಿಶೀಲ್ಡ್ ಎರಡೂ ಲಸಿಕೆಗಳನ್ನು ದೇಶದ 3 ಕೋಟಿ ಜನರಿಗೆ ಉಚಿತವಾಗಿ ನೀಡಲು ಸಿದ್ಧತೆ ಮಾಡಿಕೊಂಡಿದ್ದು, ಕೇಂದ್ರ ಸರಕಾರವೇ ವೆಚ್ಚವನ್ನು ಭರಿಸಲಿದೆ. ರಾಜ್ಯದಲ್ಲಿ ಮೊದಲ ಹಂತದಲ್ಲಿ 16 ಲಕ್ಷಕ್ಕೂ ಹೆಚ್ಚು ಮಂದಿಗೆ ಲಸಿಕೆ ನೀಡಲಾಗುವುದು ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ತಿಳಿಸಿದರು.
ಪ್ರಧಾನಿ ನರೇಂದ್ರ ಮೋದಿಯವರ ಅಧ್ಯಕ್ಷತೆಯಲ್ಲಿ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಮೊದಲ ಹಂತದಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವ ಕೊರೋನ ಯೋಧರು, ಪೊಲೀಸರು, ಗ್ರಾಮೀಣಾಭಿವೃದ್ಧಿ ಸೇರಿದಂತೆ ಇತರೆ ಇಲಾಖೆಗಳ ಸಿಬ್ಬಂದಿ ಸೇರಿ 16 ಲಕ್ಷಕ್ಕೂ ಹೆಚ್ಚು ಮಂದಿಗೆ ಲಸಿಕೆ ನೀಡಲಾಗುವುದು ಎಂದರು.
ಎರಡು ಡೋಸ್: ಲಸಿಕೆಯ ಮೊದಲ ಡೋಸ್ ಪಡೆದ 28 ದಿನಗಳ ಬಳಿಕ ಮತ್ತೊಂದು ಡೋಸ್ ಪಡೆಯಬೇಕು ಎಂದು ತಿಳಿಸಲಾಗಿದೆ. ಅಂದರೆ, 45 ದಿನಗಳ ಬಳಿಕ ರೋಗ ನಿರೋಧಕ ಶಕ್ತಿ ಉತ್ಪತ್ತಿಯಾಗುತ್ತದೆ. ಅಲ್ಲಿಯವರೆಗೆ ಎಚ್ಚರದಿಂದಿರಬೇಕು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ ಎಂದು ಸುಧಾಕರ್ ಮಾಹಿತಿ ನೀಡಿದರು.
ಕೊರೋನ ಲಸಿಕೆಯ ಬಗ್ಗೆ ಯಾರೂ ಆತಂಕ ಪಡಬೇಕಿಲ್ಲ. ಈ ಲಸಿಕೆ ಸುರಕ್ಷಿತವಾಗಿದ್ದು, ಕ್ಲಿನಿಕಲ್ ಟ್ರಯಲ್‍ಗಳನ್ನು ಮಾಡಲಾಗಿದೆ. ರಾಜ್ಯ ಸರಕಾರ ಎಲ್ಲ ಬಗೆಯ ಸಿದ್ಧತೆಗಳನ್ನು ಮಾಡಿದ್ದು, ಕೇಂದ್ರ ಸರಕಾರ ಹೆಚ್ಚುವರಿಯಾಗಿ ವಾಕ್-ಇನ್ ಫ್ರೀಜರ್ ನೀಡಲಿದೆ. ಲಸಿಕೆಯನ್ನು ಜಿಲ್ಲೆಗಳಿಗೆ ಕಳುಹಿಸಿಕೊಡಲಾಗುತ್ತದೆ. ಜ.16ರಿಂದ ಲಸಿಕೆಯ ವಿತರಣೆ ನಡೆಯಲಿದೆ ಎಂದು ಸಚಿವ ಸುಧಾಕರ್ ತಿಳಿಸಿದರು.
ಆರೋಗ್ಯ ಸಿಬ್ಬಂದಿಗೆ ಲಸಿಕೆ ಕೊಟ್ಟ ಬಳಿಕ 50 ವರ್ಷ ಮೇಲ್ಪಟ್ಟವರು ಹಾಗೂ ಇತರೆ ರೋಗ ಇರುವವರನ್ನು ಗುರುತಿಸಿ ಅವರಿಗೆ ಲಸಿಕೆ ನೀಡಬೇಕೆಂದು ಕೇಂದ್ರ ಸರಕಾರ ಸೂಚಿಸಿದೆ. ರಾಜ್ಯದಲ್ಲಿ ಲಸಿಕೆ ಸಂಗ್ರಹ ಮತ್ತು ವಿತರಣೆಗೆ ಸಿದ್ಧತೆ ಪೂರ್ಣಗೊಂಡಿದ್ದು, ಯಾವುದೇ ಲೋಪಗಳಾಗದಂತೆ ಎಚ್ಚರ ವಹಿಸಲಾಗಿದೆ ಎಂದು ಸುಧಾಕರ್ ಹೇಳಿದರು.
‘ಯು.ಕೆ.ಯಿಂದ ಬಂದ ಕೆಲ ವಿದೇಶಿಯರು ಆ ದೇಶದ ಪಾಸ್‍ಪೋರ್ಟ್ ತಂದಿದ್ದು, ಸ್ಥಳೀಯ ಸಂಪರ್ಕ ಸಂಖ್ಯೆ ಲಭ್ಯವಿಲ್ಲ. ಬೇರೆ ಊರಿಗೂ ಪ್ರಯಾಣ ಮಾಡಿರುವ ಸಾಧ್ಯತೆ ಇದ್ದು, ಕೇಂದ್ರ ಗೃಹ ಇಲಾಖೆಗೆ ಅವರ ವಿವರಗಳನ್ನು ನೀಡಲಾಗಿದೆ'
-ಡಾ.ಕೆ.ಸುಧಾಕರ್, ಆರೋಗ್ಯ ಸಚಿವ







