ದರ್ಪ, ಅಹಂಕಾರದಿಂದ ಕಾಂಗ್ರೆಸ್ ಧೂಳೀಪಟವಾಗುತ್ತಿದೆ: ನಳೀನ್ ಕುಮಾರ್ ಕಟೀಲು

ಮೈಸೂರು,ಜ.11: ಮೂರು ಶಾಪಗಳು ಹಾಗೂ ಅಧಿಕಾರದಲ್ಲಿದ್ದಾಗ ತೋರಿದ ದರ್ಪ, ಅಹಂಕಾರದಿಂದ ಕಾಂಗ್ರೆಸ್ ಧೂಳಿಪಟವಾಗುತ್ತಿದೆ ಎಂದು ಬಿಜೆಪಿ ರಾಜ್ಯ ಅಧ್ಯಕ್ಷ ನಳಿನ್ ಕುಮಾರ್ ಕಟೀಲು ಟೀಕಾಪ್ರಹಾರ ನಡೆಸಿದರು.
ನಗರದ ಕಲಾಮಂದಿರದಲ್ಲಿ ಸೋಮವಾರ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಗೆದ್ದಿರುವ ಬೆಜೆಪಿ ಬೆಂಬಲಿತ ಸದಸ್ಯರನ್ನು ಸನ್ಮಾನಿಸಲು ಬಿಜೆಪಿ ಆಯೋಜಿಸಿರುವ 'ಜನ ಸೇವಕ್' ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಗಾಂಧೀಜಿ ಹೆಸರು ಹೇಳಿಕೊಂಡು ಅಧಿಕಾರಕ್ಕೇರಿದ ಕಾಂಗ್ರೆಸ್ ಪಕ್ಷವು ಅವರ ವಿಚಾರಧಾರೆ, ಗ್ರಾಮ ಸ್ವರಾಜ್ಯ ಪರಿಕಲ್ಪನೆ ಮರೆಯಿತು. ಮತ ಭೇಟೆಗಾಗಿ ಅಂಬೇಡ್ಕರ್ ಫೋಟೊ ಬಳಸುವ ಈ ಪಕ್ಷವು ಅವರು ಜೀವಂತವಾಗಿದ್ದಾಗ ಸರಿಯಾಗಿ ಗೌರವವನ್ನೇ ಕೊಡಲಿಲ್ಲ. ಅವರ ವಿರುದ್ಧ ಅಭ್ಯರ್ಥಿಗಳನ್ನು ಹಾಕಿ ಕಾಂಗ್ರೆಸ್ ಪಕ್ಷ ಸೋಲಿಸಿತು. ಅವರು ನಿಧನರಾದಾಗ ಅವರ ಅಂತ್ಯ ಸಂಸ್ಕಾರಕ್ಕೆ ಜಾಗ ನೀಡಲಿಲ್ಲ. ಹತ್ತಾರು ಚುನಾವಣೆಗಳಲ್ಲಿ ಗೋಮಾತೆಯ ಚಿಹ್ನೆ (ಹಸು ಹಾಗೂ ಕರು) ಅಡಿಯಲ್ಲಿ ಗೆಲುವು ಸಾಧಿಸಿತು. ಆದರೆ, ಅದನ್ನು ಮರೆತು ಹಸು ಹಂತಕರಿಗೆ ಮಣೆ ನೀಡಿತು. ಗೋಮಾಂಸ ತಿನ್ನುವ ಹೇಳಿಕೆ ನೀಡಿ ದೇಶದ ಸಂಸ್ಕೃತಿಗೆ ಅವಮಾನ ಎಸಗುತ್ತಿದೆ ಎಂದು ಟೀಕಿಸಿದರು.
ಗಾಂಧಿ, ಅಂಬೇಡ್ಕರ್ ಹಾಗೂ ಗೋಹತ್ಯೆ ಶಾಪ ಕಾಂಗ್ರೆಸ್ ಪಕ್ಷವನ್ನು ತಟ್ಟಿವೆ. ಈಗ ಕಾಂಗ್ರೆಸ್‍ನಲ್ಲಿ ನಾಯಕತ್ವಕ್ಕಾಗಿ ಜಗಳ ನಡೆಯುತ್ತಿದೆ. ಸಿದ್ರಾಮಣ್ಣ ಟವೆಲ್ ಹಾಕಿದ್ದಾರೆ. ಅದನ್ನು ಎಳೆಯಲು ಡಿ.ಕೆ.ಶಿವಕುಮಾರ್ ಪ್ರಯತ್ನಿಸುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.





