ಟ್ರಂಪ್ ವಾಗ್ದಂಡನೆಗೆ ತುರ್ತು ಕ್ರಮ: ನ್ಯಾನ್ಸಿ ಪೆಲೋಸಿ

ವಾಶಿಂಗ್ಟನ್, ಜ. 11: ಅವೆುರಿಕದ ಸಂಸತ್ ಮೇಲೆ ಕಳೆದ ವಾರ ನಡೆದ ಭೀಕರ ದಾಳಿಯ ಹಿನ್ನೆಲೆಯಲ್ಲಿ, ದೇಶದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ವಾಗ್ದಂಡನೆ ಕಲಾಪಗಳನ್ನು ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಆರಂಭಿಸಲಿದೆ ಎಂದು ಅದರ ಸ್ಪೀಕರ್ ನ್ಯಾನ್ಸಿ ಪೆಲೋಸಿ ರವಿವಾರ ಹೇಳಿದ್ದಾರೆ.
ಅದೇ ವೇಳೆ, ಟ್ರಂಪ್‌ರನ್ನು ಪದಚ್ಯುತಗೊಳಿಸಲು ಸಾಂವಿಧಾನಿಕ ಅಧಿಕಾರವನ್ನು ಬಳಸಿಕೊಳ್ಳುವಂತೆ ಅವರು ಉಪಾಧ್ಯಕ್ಷ ಮೈಕ್ ಪೆನ್ಸ್‌ರನ್ನು ಒತ್ತಾಯಿಸಿದ್ದಾರೆ.
ಸಂವಿಧಾನದ 25ನೇ ತಿದ್ದುಪಡಿಯ ಅಡಿಯಲ್ಲಿ ಲಭ್ಯವಿರುವ ಅಧಿಕಾರವನ್ನು ಬಳಸಿಕೊಂಡು, ತನ್ನ ಕರ್ತವ್ಯವನ್ನು ನಿಭಾಯಿಸಲು ಸಾಧ್ಯವಾಗದ ಟ್ರಂಪ್‌ರನ್ನು ಅಧಿಕಾರದಿಂದ ಕೆಳಗಿಳಿಸುವಂತೆ ಉಪಾಧ್ಯಕ್ಷ ಮತ್ತು ಸಚಿವ ಸಂಪುಟವನ್ನು ಒತ್ತಾಯಿಸುವ ನಿರ್ಣಯಕ್ಕೆ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ನಲ್ಲಿ ಸೋಮವಾರ (ಅಮೆರಿಕ ಕಾಲಮಾನ) ಮತದಾನ ನಡೆಯುತ್ತದೆ.
ಈ ನಿರ್ಣಯದಂತೆ ಕ್ರಮ ತೆಗೆದುಕೊಳ್ಳಲು ಪೆನ್ಸ್ ಮತ್ತು ಸಚಿವ ಸಂಪುಟಕ್ಕೆ 24 ಗಂಟೆಗಳ ಸಮಯಾವಕಾಶ ಇರುತ್ತದೆ. ಅದರ ಬಳಿಕ, ವಾಗ್ದಂಡನೆ ಕಲಾಪವನ್ನು ಹೌಸ್ ಆಪ್ ರೆಪ್ರೆಸೆಂಟೇಟಿವ್ಸ್ ಆರಂಭಿಸುತ್ತದೆ.
‘‘ನಾವು ತುರ್ತಿನಲ್ಲಿ ವ್ಯವಹರಿಸಲಿದ್ದೇವೆ. ಯಾಕೆಂದರೆ ಅಧ್ಯಕ್ಷರು ಅಪಾಯಕಾರಿಯಾಗಿದ್ದಾರೆ’’ ಎಂದು ರವಿವಾರ ರಾತ್ರಿ ಸಹೋದ್ಯೋಗಿಗಳಿಗೆ ಬರೆದ ಪತ್ರದಲ್ಲಿ ಪೆಲೋಸಿ ಹೇಳಿದ್ದಾರೆ.