ನಗ್ನಚಿತ್ರಗಳ ಮೋಹದಿಂದ ಪಾಕಿಸ್ತಾನಕ್ಕೆ ಸೇನೆಯ ರಹಸ್ಯ ಮಾಹಿತಿಗಳನ್ನು ರವಾನಿಸಿದ ಸತ್ಯನಾರಾಯಣ ಪಲಿವಾಲ್ ಸೆರೆ

photo: india today
ಹೊಸದಿಲ್ಲಿ,ಜ.11: ನಗ್ನ ಚಿತ್ರಗಳು ಮತ್ತು ಅಶ್ಲೀಲ ಚಾಟ್ ಗಳಿಗೆ ಬಲಿ ಬಿದ್ದು ಭಾರತೀಯ ಸೇನೆಯ ರಹಸ್ಯ ಮಾಹಿತಿಗಳನ್ನು ಪಾಕಿಸ್ತಾನದ ಬೇಹುಗಾರಿಕಾ ಸಂಸ್ಥೆ ಐಎಸ್ಐಗೆ ಕಳುಹಿಸಿದ ವ್ಯಕ್ತಿಯೋರ್ವನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ರಾಜಸ್ಥಾನದ ಜೈಸಲ್ಮೇರ್ ಸಮೀಪದ ನಿವಾಸಿಯಾಗಿರುವ ಸತ್ಯನಾರಾಯಣ ಪಲಿವಾಲ್ ಎಂದು ಗುರುತಿಸಲಾಗಿದೆ.
ವಿಚಾರಣೆಯ ಸಂದರ್ಭ, "ಐಎಸ್ಐ ಪರವಾಗಿ ನನ್ನೊಂದಿಗೆ ಮಾತನಾಡಿದ್ದ ಮಹಿಳೆಯು ನಗ್ನ ಚಿತ್ರಗಳನ್ನು ಕಳುಹಿಸಿ ಪ್ರಚೋದಿಸಿದ್ದ, ಅದಕ್ಕೆ ಬದಲಾಗಿ ಹಲವಾರು ಸೇನಾ ಮಾಹಿತಿಗಳನ್ನು ನಾನು ನೀಡಿದ್ದೇನೆ. ಅವರು ಗಡಿಯಲ್ಲಿನ ಸೇನೆಯ ಚಲನವಲನಗಳ ಕುರಿತು ಹಾಗೂ ಪೊಖ್ರಾನ್ ಸೇನಾ ನೆಲೆಯ ಮಾಹಿತಿಗಳನ್ನು ಕೇಳಿದಾಗ ನಾನು ನೀಡಿದ್ದೇನೆ" ಎಂದು ಆತ ಹೇಳಿದ್ದಾಗಿ indiatoday.in ವರದಿ ಮಾಡಿದೆ.
ಫೇಸ್ ಬುಕ್ ನ ನಕಲಿ ಖಾತೆಯ ಮೂಲಕ ಮಹಿಳೆಯು ಈತನಿಗೆ ಪರಿಚಯವಾಗಿದ್ದು, ಅದರಲ್ಲೇ ಈತ ಸೇನೆಯ ಹಲವಾರು ಮಾಹಿತಿಗಳನು ರವಾನಿಸುತ್ತಿದ್ದ ಎನ್ನಲಾಗಿದೆ. ಹಲವಾರು ತಿಂಗಳುಗಳಿಂದ ಇವರಿಬ್ಬರೂ ಸಂದೇಶ ವಿನಿಮಯ ನಡೆಸುತ್ತಿದ್ದು, ಆರೋಪಿ ಸತ್ಯನಾರಾಯಣನ ಫೋನ್ ಪರಿಶೀಲಿಸಿದಾಗ ಸೇನೆಗೆ ಸಂಬಂಧಿಸಿದ ಹಲವಾರು ಮಹತ್ವದ ದಾಖಲೆಗಳು ದೊರೆತಿವೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾಗಿ ವರದಿಯಾಗಿದೆ.





